- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂದೂ ದೇವಾಲಯಗಳ ಹಣ ಮದ್ರಸ ಇಮಾಮಗಳಿಗೆ ತಸ್ತೀಕ್ ರೂಪದಲ್ಲಿ ನೀಡಿದ ಸರಕಾರ

VHP appeal [1]ಮಂಗಳೂರು :  ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವಂತೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯಲ್ಲಿನ ಅನುದಾನ ಇತರ ಧರ್ಮದ ಪ್ರಾರ್ಥನಾ ಮಂದಿರಗಳಿಗೆ ತಸ್ತೀಕ್ ರೂಪದಲ್ಲಿ ತಲುಪಿದ್ದು, ಈ ಬಗ್ಗೆ ಹಿಂದೂ ಧಾರ್ಮಿಕ ಮುಖಂಡರಿಂದ ಬಂದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮಾಧ್ಯಮದ ಮೂಲಕ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯದಲ್ಲಿ ನಮ್ಮ ಸರಕಾರ ಬರುವ ಮುಂಚೆ ಇಲಾಖೆಯ ಮೂಲಕ ಮಂಜೂರಾಗುತ್ತಿರುವ ತಸ್ತೀಕ್ ಹಣ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಕೂಡ ಬಿಡುಗಡೆ ಮಾಡುತ್ತಿರುವ ಬಗ್ಗೆ ಮಾಹಿತಿ ಒದಗಿದ್ದು, ತಕ್ಷಣ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಮೂಲಕ ಹಿಂದೂ ಧರ್ಮವನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದನ್ನು ತಡೆಹಿಡಿಯಲು ಸೂಚಿಸಿದ್ದಾರೆ. ಇತರೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಹಣದ ಅವಶ್ಯಕತೆಯಿದ್ದಲ್ಲಿ, ಆಯಾಯ ಇಲಾಖೆಯ ಜವಾಬ್ದಾರಿ ಹಾಗೂ ಆಯಾ ಇಲಾಖೆಯ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು  ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು  ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆ ಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ರಾಜ್ಯದಲ್ಲಿ 27ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ತಸ್ತೀಕ್ ನೀಡಲಾಗುತ್ತಿದ್ದು, ಸುಮಾರು 133 ಕೋಟಿ ರೂಪಾಯಿ ಸರಕಾರ ವಾರ್ಷಿಕ ಅನುದಾನ ಹಂಚುತ್ತಿದೆ. ಈ ಪೈಕಿ ಸುಮಾರು 764 ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳು ಇಲಾಖೆಯಿಂದ ತಸ್ತೀಕ್ ಪಡೆಯುತ್ತಿದ್ದು, ಮಂತ್ರಿಗಳ ಸೂಚನೆ ಮೇರೆಗೆ ಅನ್ಯ ಧರ್ಮೀಯ ಪ್ರಾರ್ಥನಾ ಮಂದಿರಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರು  ತಿಳಿಸಿದ್ದಾರೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣ ಕನ್ನಡದ ಮಸೀದಿ, ಮದ್ರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಯನ್ನು ವಿಶ್ವ ಹಿಂದೂ ಪರಿಷದ್ ವಿರೋಧಿಸಿದ್ದು, ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದೆ.

ರಾಜ್ಯದಲ್ಲಿ ಕೋವಿಡ್ ಸಂಕಷ್ಟದಿಂದ ಅರ್ಚಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ‌. ಈ ಹಿನ್ನೆಲೆ ಸರ್ಕಾರದಿಂದ ತಸ್ತಿಕ್ ಭತ್ತೆ ನೀಡಲು ಆದೇಶಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ. ಆದರೆ, ಅದೇ ಆದೇಶದ ಪ್ರಕಾರ, ತಸ್ತಿಕ್ ಹಣವನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ದ.ಕ. ಜಿಲ್ಲೆಯ 41 ಮಸೀದಿ, ಮದರಸಾದ ಮೌಲ್ವಿಗಳಿಗೆ ನೀಡಲು ನಿರ್ಧರಿಸಿದ್ದನ್ನು ವಿಶ್ವ ಹಿಂದೂ ಪರಿಷದ್ ವಿರೋಧಿಸುತ್ತದೆ. ಆದ್ದರಿಂದ ದೈವಸ್ಥಾನ, ದೇವಸ್ಥಾನದ ಹಣವನ್ನು ಹಿಂದೂಗಳಿಗೆ ಅಥವಾ ದೇವಸ್ಥಾನದ ಕಾರ್ಯಗಳಿಗೆ ಮಾತ್ರ ವಿನಿಯೋಗಿಸಬೇಕೇ ಹೊರತು ಮಸೀದಿ, ಮದರಸಾಗಳಿಗೆ ಉಪಯೋಗಿಸುವುದನ್ನು ಖಂಡಿಸುತ್ತೇವೆ ಎಂದಿದೆ.