- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ

Basavaraja Bommai [1]
ಬೆಂಗಳೂರು : ಕೇಂದ್ರ ಪುರಸ್ಕೃತ ಯೋಜನೆಗಳಿಗೆ ತನ್ನ ಪಾಲಿನ ಹಣ ಬಿಡುಗಡೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದ್ದಾರೆಂದು ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ನಿರ್ಮಲಾ ಸೀತಾರಾಮನ್ ಜತೆ ಚರ್ಚೆ ನಡೆಸಲಾಯಿತು.

ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಾಜ್ಯಸರ್ಕಾರಕ್ಕೆ ಬಿಡುಗಡೆಯಾಗಬೇಕಿರುವ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿರ್ಮಲಾ ಸೀತಾರಾಮನ್, ತ್ವರಿತ ಗತಿಯಲ್ಲಿ ಕೇಂದ್ರ ಪ್ರಯೋಜಿತ ಯೋಜನೆಗಳಿಗೆ ತನ್ನ ಪಾಲಿನ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು ಎಂದು ಸಚಿವ ಬೊಮ್ಮಾಯಿ ಹೇಳಿದರು.

Basavaraja Bommai [2]ಕಳೆದ ವರ್ಷದ ಜಿಎಸ್ಟಿ ಪರಿಹಾರ ಬಾಕಿ 11800 ಕೋಟಿ ರೂಪಾಯಿ ಹಣವನ್ನು ರಾಜ್ಯಕ್ಕೆ ನೀಡಲು ಕ್ರಮಕೈಗೊಳ್ಳಲಾಗುವುದು. ಕಳೆದ ಬಾರಿಯಂತೆ ಜಿಎಸ್ಟಿ ಪರಿಹಾರ 18000 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಸಾಲ ಪಡೆದು ರಾಜ್ಯಕ್ಕೆ ಒದಗಿಸುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದರೆಂದು ಬೊಮ್ಮಾಯಿ ವಿವರಿಸಿದರು.

2021- 22 ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಂಗ್ರಹವಾಗಿರುವ ಜಿಎಸ್ಟಿ ಪಾಲಿನ ಮೊದಲ ಕಂತನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಅದಕ್ಕೆ ಸಚಿವರು ಒಪ್ಪಿಗೆ ನೀಡಿದರು. ಕೋವಿಡ್ ನಿರ್ವಹಣೆ ಮತ್ತು ಕೋವಿಡ್ ಮೂರನೇ ಅಲೆ ತಯಾರಿಗೆ ಬೇಕಾದ ಹಣಕಾಸಿನ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚೆಯಾಯಿತು. ಕೋವಿಡ್ ನಿರ್ವಹಣೆಗೆ ಯಾವುದೇ ರೀತಿಯ ಹಣಕಾಸಿನ ಅಭಾವ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಅವರು ನೀಡಿದರು ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೋವಿಡ್ ಎರಡನೆ ಅಲೆಯನ್ನು ನಿರ್ವಹಣೆ ಮಾಡಿದ ರೀತಿ, ಬಡವರಿಗೆ ನೀಡಲಾದ ಪ್ಯಾಕೇಜ್, ಕೋವಿಡ್ ನಿಂದ ಸಾವನ್ನಪ್ಪಿದ ಬಿಪಿಎಲ್ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ, ಖಾಸಗಿ ಆಸ್ಪತ್ರೆಗಳ ಸಹಕಾರದೊಂದಿಗೆ ಕೋವಿಡ್ ಎರಡನೇ ಅಲೆಯನ್ನು ನಿರ್ವಹಣೆ ಮಾಡಿದ ರಾಜ್ಯ ಸರ್ಕಾರದ ಕ್ರಮಕ್ಕೆ ನಿರ್ಮಲ ಸಿತಾರಾಮನ್ ಹರ್ಷ ವ್ಯಕ್ತಪಡಿಸಿದರು.

ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಭೇಟಿ ಯಶಸ್ವಿಯಾಗಿದೆ. ರಾಜ್ಯದ ಬೇಡಿಕೆಗಳಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಿಎಸ್ಟಿ ಪರಿಹಾರದ ಬಾಕಿ ಹಣ ಬಿಡುಗಡೆಗೆ ಒಪ್ಪಿದ್ದಾರೆ. ಕೋವಿಡ್ ನಿರ್ವಹಣೆಗೆ ಆರ್ಥಿಕ ನೆರವಿನ ಭರವಸೆ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ
ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು