- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪರೀಕ್ಷೆಗೆ ಸ್ಯಾನಿಟೈಸರ್, ಮಾ‌ಸ್ಕ್ ಗಳ ಕೊಡುಗೆ

Exam [1]ಬೆಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಲಿ ಪರೀಕ್ಷೆಯು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಸಲುವಾಗಿ ಹಲವಾರು ಸಂಘ ಸಂಸ್ಥೆಸಗಳು ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನೀಡಿದ್ದಾರೆ.

ಈ ಸಂಘ ಸಂಸ್ಥೆಗಳವರು ತಾವು ಪರೀಕ್ಷಾ‌ರ್ಥಿಗಳಿಗೆ ಒದಗಿಸುವ ಪರಿಕರಗಳನ್ನು ಶುಕ್ರವಾರ ಡಿ.ಎಸ್‍.ಇ.ಆರ್.ಟಿ.ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷದಂತೆಯೇ ಅನೇಕ ಸಂಘಸಂಸ್ಥೆಗಳವರು ನಮ್ಮ ಮಕ್ಕಳ ಹಿತಕ್ಕೋಸ್ಕರ ಮತ್ತು ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗಾಗಿ ಈ ವರ್ಷವೂ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಒದಗಿಸುತ್ತಿರುವುದು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಪರೀಕ್ಷೆಗಳು ಮತ್ತು ಮಕ್ಕಳ ಹಿತಾಸಕ್ತಿ ಕುರಿತು ಸಮಾಜದ ಬೆಂಬಲ ಈ ಮೂಲಕ ವ್ಯಕ್ತವಾಗಿರುವುದು ನಮ್ಮಲ್ಲಿ ಹರ್ಷ ಮೂಡಿಸಿದೆ ಎಂದರು.

ಹಾಗೆಯೇ ಸಹಾಯ ಮತ್ತು ಸಹಕಾರದ ಹಸ್ತ ಚಾಚಿರುವ ಎಲ್ಲರಿಗೂ ಸಚಿವರು ಕೃತಜ್ಞತೆ ಸಲ್ಲಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪರೀಕ್ಷಾರ್ಥಿಗಳಿಗೆ ಬಟ್ಟೆಯಿಂದ ಮಾಡಿದ ಮಾಸ್ಕ್ ಮತ್ತು ಸಿಬ್ಬಂದಿಗೆ ಎನ್-95 ಮಾಸ್ಕ್‍ಗಳನ್ನು ನೀಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಧುರೀಣ ಪಿ.ಜಿ.ಆರ್.ಸಿಂಧ್ಯಾ ಅವರು ತಮ್ಮ ಸಂಸ್ಥೆಯ ಕೊಡುಗೆಗಳನ್ನು ಸಚಿವರಿಗೆ ಹಸ್ತಾಂತರಿಸಿ, ತಮ್ಮ ಸಂಸ್ಥೆಯಿಂದ ಮಕ್ಕಳ ಹಿತಕ್ಕಾಗಿ ಅಲ್ಪ ಪ್ರಮಾಣದ ಸಹಾಯ ಮಾಡಲು ಅವಕಾಶ ಮಾಡಿಕೊಟ್ಟ ಶಿಕ್ಷಣ ಇಲಾಖೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಯೂತ್ ಫಾರ್ ಸೇವಾ ಸಂಸ್ಥೆ 1.10 ಲಕ್ಷ ಎನ್-95 ಮಾಸ್ಕ್ ಗಳನ್ನು, ರೋಟರಿ ಇಂಟರ್‌ ನ್ಯಾಷನಲ್- 1.34 ಲಕ್ಷ ಎನ್-95 ಮಾಸ್ಕ್ ಗಳನ್ನು, ಅಡ್ವಾನ್ಸಡ್ ಎಜುಕೇಷನಲ್ ಸರ್ವೀಸಸ್ ಮತ್ತು ರೈನ್‍ಬೋ ಮಕ್ಕಳ ಆಸ್ಪತ್ರೆಯವರು ಮೂರು ಪದರದ ಒಂದು ಲಕ್ಷ ಸರ್ಜಿಕಲ್ ಮಾಸ್ಕ್ ಗಳು, ಎಂಬೆಸ್ಸಿ ಗ್ರೂಪ್ ಸಂಸ್ಥೆ 10 ಲ್ಕಷ ರೂ. ಮೌಲ್ಯದ ಸ್ಯಾನಿಟೈಸ‌ರ್‌ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಒದಗಿಸಿದರು.

ಪರೀಕ್ಷಾ ಸಿದ್ಧತೆ ಕುರಿತು ಕಿರುಚಿತ್ರ:
ರಾಜ್ಯದಲ್ಲಿ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಸಂಬಂಧದಲ್ಲಿ ಶಿಕ್ಷಣ ಇಲಾಖೆ ರಾಜ್ಯದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡಿರುವ ಪರೀಕ್ಷಾ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕಿರುಚಿತ್ರ ಪ್ರದರ್ಶಿಸಲಾಯಿತು.

ಕಿರುಚಿತ್ರವನ್ನು ರಾಜ್ಯದ ಮೂಲೆಮೂಲೆಗಳಿಗೂ ತಮ್ಮ ವಾಹಿನಿಗಳ ಮೂಲಕ ಪ್ರಚುರಪಡಿಸಿ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪೋಷಕರು ಮತ್ತು ಮಕ್ಕಳಲ್ಲಿ ಇನ್ಣೂ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಬೇಕೆಂದು ಸಚಿವರು ಮಾಧ್ಯಮ ಪ್ರತಿನಿಧಿಗಳನ್ನು ಕೋರಿದರು.