- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಸ್ಸೆಸ್ಸೆಲ್ಸಿ: ಭರವಸೆ ಮೂಡಿಸಿದ ತೀರ್ಪು-ಸುರೇಶ್ ಕುಮಾರ್

Suresh-Kumar [1]ಬೆಂಗಳೂರು: ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ ಉಚ್ಚ ನ್ಯಾಯಾಲಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪುರಸ್ಕರಿಸಿದ್ದು, ರಾಜ್ಯದ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆಗೆ ಭರವಸೆ ಮೂಡಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪರೀಕ್ಷೆ ಸಂಬಂಧದಲ್ಲಿ ಈ ವರ್ಷ ಕೈಗೊಂಡಿರುವ ಸರಳೀಕೃತ ಪರೀಕ್ಷಾ ವ್ಯವಸ್ಥೆ ಮತ್ತು ರಾಜ್ಯ ಆರೋಗ್ಯ ಇಲಾಖೆ ರೂಪಿಸಿದ ಎಸ್ ಒ ಪಿ ಪಾಲನೆಗಳಂತಹ ಉಪಕ್ರಮಗಳ ಕುರಿತಂತೆ ಸರ್ಕಾರದ ವೈಜ್ಞಾನಿಕ ಆಲೋಚನೆಗಳನ್ನು ಪುರಸ್ಕರಿಸಿ, ಇದು ಇಡೀ ರಾಷ್ಟ್ರಕ್ಕೆ ಮಾದರಿಯಾದ ಉಪಕ್ರಮವಾಗಿದೆ ಎಂದಿರುವ ಹೈಕೋರ್ಟ್ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹೈಕೋರ್ಟ್ ಸಕಾಲಿಕ ನಿರ್ಧಾರವನ್ನು ಕೈಗೊಂಡಿದ್ದು, ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸುವ ಸರ್ಕಾರದ ಕ್ರಮಕ್ಕೆ ಬಲ ಬಂದಂತಾಗಿದ್ದು, ನಮ್ಮೆಲ್ಲರಲ್ಲೂ ಒಂದು ಭರವಸೆ ಮೂಡಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಕಳೆದ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂಧದಲ್ಲಿ ಇದೇ ರೀತಿಯಲ್ಲಿ ಹೈಕೋರ್ಟ್ ತೀರ್ಪು ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿದಾರರ ಸಲ್ಲಿಸಿದ್ದ ಎಸ್.ಎಲ್.ಪಿ. ಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದು ರಾಜ್ಯದ ಕ್ರಮವನ್ನು ಪುರಸ್ಕರಿಸಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.