ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ದೆಹಲಿಯಲ್ಲಿದ್ದುಕೊಂಡೇ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಉಂಟಾದ ಭಾರಿ ಮಳೆಯ ವಿವರಗಳನ್ನು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದಾರೆ.
ಬೆಳಿಗ್ಗೆಯೇ ತಮ್ಮ ದೆಹಲಿಯ ಕಛೇರಿ ಕೃಷಿ ಭವನಕ್ಕೆ ತೆರಳಿ ವಿಡಿಯೋ ಕಾನ್ಫೆರನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಮಳೆಯಿಂದ ಆಗಲಿರುವ ಪೃಕತಿ ವಿಕೋಪಗಳ ಕುರಿತು, ಜಿಲ್ಲೆಯಲ್ಲಿನ ಕೋವಿಡ್ ನಿರ್ವಹಣೆ, ಮೂರನೇ ಅಲೆಗೆ ಜಿಲ್ಲೆ ನಡೆಸಿರುವ ತಯಾರಿಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಅವರು ಮಳೆಯಿಂದ ಆಗುತ್ತಿರುವ ಅನಾಹುತ, ಅವ್ಯವಸ್ಥೆಗಳ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜನರ ಕಷ್ಟ ನಷ್ಟಗಳಿಗೆ ಧಾವಿಸುವ ಸಂದರ್ಭ ಒದಗಿಬಂದರೆ ಸೂಕ್ತ ವ್ಯವಸ್ಥೆ ಮಾಡುವಂತೆ ಕೂಡ ಸೂಚಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಆನಂತರ ಕ್ಷೇತ್ರಕ್ಕೂ ತೆರಳದೆ ತಮ್ಮ ಇಲಾಖೆಯ ಅಧ್ಯಯನದಲ್ಲಿ ತೊಡಗಿದ್ದಾರೆ. ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗಲಿದೆ. ಆಗ ಕೃಷಿ ಇಲಾಖೆ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಮತ್ತು ಚರ್ಚೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಆದುದರಿಂದ ಸಂಸತ್ ಅಧಿವೇಶನದವರೆಗೆ ದೆಹಲಿಯಲ್ಲೇ ಇರಲಿದ್ದಾರೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು ಜುಲೈ 16ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.17ರಂದು ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಪ್ರದೇಶದ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಜುಲೈ 7ರಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ ಜುಲೈ 8ರಂದು ಅಧಿಕಾರ ಸ್ವೀಕರಿಸಿದರು. ಸಚಿವರಾದ ಬಳಿಕ ಊರಿಗೂ ತೆರಳದೆ ನಿರಂತರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಾ, ಇಲಾಖೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English