- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಲಸಿಕೆ ಒದಗಿಸಲು ಪ್ರಧಾನಿಗೆ ಮನವಿ

CM Video Conference [1]ಬೆಂಗಳೂರು : ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ 19 ಪರಿಸ್ಥಿತಿ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸಿನಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಧಾನ ಮಂತ್ರಿಯವರು ಮಾತನಾಡಿ, ಯುರೋಪ್ ಮತ್ತಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.ಮೂರನೇ ಅಲೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಇಳಿಮುಖವಾಗಿದ್ದು, 1900 ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಸುಮಾರು 400ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಶೇ. 1.42 ರಷ್ಟಿದ್ದು, ಮರಣ ಪ್ರಮಾಣ ಶೇ. 1.25 ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ರಾಜ್ಯದಲ್ಲಿ ಈ ವರೆಗೆ 2.62 ಕೋಟಿ ಲಸಿಕೆ ನೀಡಲಾಗಿದ್ದು, ಪ್ರತಿ ದಿನ 5 ಲಕ್ಷ ಡೋಸ್ ಗಳಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

ಕೋವಿಡ್ 19ರ ಪಾಸಿಟಿವಿಟಿ ದರ, ಪ್ರಕರಣಗಳ ಸಂಖ್ಯೆ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಆಧರಿಸಿ, ನಿರ್ಬಂಧಗಳನ್ನು ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಖಾತರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಎಲ್ಲ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ ಗಳು, ವೆಂಟಿಲೇಟರ್ ಬೆಡ್ ಗಳು ಹಾಗೂ ಮಕ್ಕಳ ಐಸಿಯು ಗಳು ಮೊದಲಾದ ಸೌಲಭ್ಯ ಹೆಚ್ಚಿಸಲಾಗುತ್ತಿದ್ದು, ವೈದ್ಯರು, ಸ್ಟಾಫ್ ನರ್ಸ್, ಪ್ರಯೋಗಾಲಯ ತಂತ್ರಜ್ಞರ ಸೇವೆ ಒದಗಿಸಲಾಗುತ್ತಿದೆ. ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯ ಪರಿಕರಗಳನ್ನೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಖರೀದಿಸಲಾಗುತ್ತಿದೆ. ಹೊಸ ಆರ್ ಟಿ ಪಿ ಸಿ ಆರ್ ಪ್ರಯೋಗಾಲಯಗಳ ಸ್ಥಾಪನೆ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬೊರೇಟರಿಗಳನ್ನು ಸ್ಥಾಪಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಮೂರನೇ ಅಲೆಯನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ಲಸಿಕೆ ಹಂಚಿಕೆ ಹೆಚ್ಚಳ, 800 ನಿಯೊ-ನೇಟಲ್ ಮತ್ತು ಪಿಡಿಯಾಟ್ರಿಕ್ ವೆಂಟಿಲೇಟರುಗಳನ್ನು ಪಿಎಂ-ಕೇರ್ಸ್ ಅಡಿ ಒದಗಿಸುವಂತೆ ಮನವಿ ಮಾಡಲಾಯಿತು.

ಜೊತೆಗೆ, ತಾಲ್ಲೂಕು ಆಸ್ಪತ್ರೆಗಳಿಗೆ 40 ಪಿಎಸ್ ಎ ಆಕ್ಸಿಜನ್ ಉತ್ಪಾದನಾ ಘಟಕಗಳ ಹಂಚಿಕೆ ಮಾಡುವಂತೆ ಹಾಗೂ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹಂಚಿಕೆಯ ವಿಕೇಂದ್ರೀಕರಣ ಮಾಡುವಂತೆ ಮನವಿ ಮಾಡಲಾಯಿತು. ಮ್ಯುಕೊರ್ಮೈಕೊಸಿಸ್ ಆಂಫೊಟೆರಿಸಿನ್-ಬಿ ಮತ್ತು ಮಕ್ಕಳಿಗೆ ಐವಿಐಜಿ ಹಂಚಿಕೆಯನ್ನು ಹೆಚ್ಚಿಸ ಬೇಕೆಂದು ಮನವಿ ಮಾಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಗೋವಿಂದ ಎಂ. ಕಾರಜೋಳ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.