- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ನಿಧನ, ಗಣ್ಯರ ಶೋಕ

G Made gowda [1]ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಶನಿವಾರ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜಿ.ಮಾದೇಗೌಡರು 94 ವರ್ಷ ವಯಸ್ಸಾಗಿತ್ತು,  ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಮಾದೇಗೌಡರು ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದರು. 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980–83ರವರೆಗೆ ಗುಂಡೂರಾವ್‌ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿದ್ದರು.

ರಾಜಕಾರಣಿ ಮಾದೇಗೌಡರು ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಇತರೆ ಅನೇಕ ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು.

ಜಿ.ಮಾದೇಗೌಡರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಹಿರಿಯ ರಾಜಕಾರಣಿ, ಮಾಜಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಸಚಿವ ಜಿ.ಮಾದೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಗಾಂಧಿವಾದಿಯಾಗಿ, ಗಾಂಧಿ ಅವರ ತತ್ವ ಆದರ್ಶಗಳನ್ನು ಜೀವನುದ್ದಕ್ಕೂ ಪಾಲಿಸಿದ ಮಾದೇಗೌಡರು, ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.

ಅವರ ನಿಧನದಿಂದ ರೈತ ಹಾಗೂ ಜನಪರ ಹೋರಾಟಗಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಗೋವಿಂದ ಕಾರಜೋಳ ತೀವ್ರ ಸಂತಾಪ

ನಾಡು ಕಂಡ ಅಪರೂಪದ ರಾಜಕಾರಣಿ, ರೈತಪರ ಹೋರಾಟಗಾರರಾದ ಶ್ರೀ ಜಿ.ಮಾದೇಗೌಡರ ನಿಧನಕ್ಕೆ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಅವರ ಆರೋಗ್ಯ ಸುಧಾರಣೆಯಾಗಿ ಮನೆಗೆ ಹಿಂದುರುಗುತ್ತಾರೆ ಎನ್ನುವ ಆಶಾ ಭಾವನೆ ನನಗಿತ್ತು. ಆದರೆ ನನ್ನನ್ನೂ ಒಳಗೊಂಡಂತೆ ಅಪಾರ ಅಭಿಮಾನಿಗಳನ್ನು ನಿರಾಶೆಗೊಳಿಸಿ ಅವರು ಅಗಲಿರುವುದು ತೀವ್ರ ದುಃಖ ಉಂಟು ಮಾಡಿದೆ.

ಮಾದೇಗೌಡರು ರೈತರ ಪರ ಹೋರಾಟ ಮಾಡಿ, ರೈತರ ಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಅವರು ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಅವರು
ಶಾಸಕರಾಗಿದ್ದರು, ಸಚಿವರಾಗಿದ್ದರು, ಸಂಸದರಾಗಿದ್ದರು. ನಿರಂತರ ಹೋರಾಟಗಳಿಂದ ಸಮಾಜಮುಖಿಯಾಗಿ ಮಾದರಿ ಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ನ್ಯಾಯ ಪರ , ರೈತಪರ ಹೋರಾಟ, ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಅವರು ರಾಜ್ಯ ಮತ್ತು ದೇಶಕ್ಕೆ ಗೌರವ ತಂದುಕೊಟ್ಟ ಅಪರೂಪದ ನಾಯಕರಾಗಿದ್ದರು.

ಭಗವಂತನು ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಡಿಸಿಎಂ ಪ್ರಾರ್ಥಸಿದ್ದಾರೆ.

 ಕೆ ಎಸ್ ಈಶ್ವರಪ್ಪ ರಪರು  ಸಂತಾಪ 

ರಾಜ್ಯದ ಹಿರಿಯ ರಾಜಕಾರಣಿ ಮಂಡ್ಯದ ಜಿ. ಮಾದೇಗೌಡ ಅವರು ನಿಧನರಾಗಿದ್ದಾರೆ. ಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದರು.

ಜನಪರ, ರೈತಪರ ಹೋರಾಟಗಳಲ್ಲಿ ಮುಂದಿರುತ್ತಿದ್ದ ಮಾದೇಗೌಡರ ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ  ಕೆ ಎಸ್ ಈಶ್ವರಪ್ಪ ರಪರು  ಸಂತಾಪ ಸೂಚಿಸಿದ್ದಾರೆ.

ಬಿ.ಸಿ.ಪಾಟೀಲ್ ಸಂತಾಪ

ಮುತ್ಸದ್ದಿ ರಾಜಕಾರಣಿ, ಹಿರಿಯ ನಾಯಕರು, ಮಾಜಿ ಸಂಸದರು ಹಾಗೂ ‘ಕಾವೇರಿ’ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೋರಾಟಗಾರ ಶ್ರೀ ಜಿ. ಮಾದೇಗೌಡ ಅವರು ವಿಧಿವಶರಾದ ಸುದ್ಧಿ ಕೇಳಿ ಅತೀವ ದುಃಖವಾಯಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂತಾಪ.

ಸಚಿವ ಅರವಿಂದ ಲಿಂಬಾವಳಿ ಶೋಕ

ಹಿರಿಯ ಗಾಂಧಿವಾದಿ, ಮಾಜಿ ಸಚಿವ, ಮಾಜಿ ಸಂಸದ ಜಿ.ಮಾದೇಗೌಡ ರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಮಂಡ್ಯ ನೆಲದ ಅಪ್ಪಟ ಹೋರಾಟಗಾರ ಜಿ.ಮಾದೇಗೌಡರು, ತಮ್ಮ ಜನಪರ ಹೋರಾಟಗಳಿಂದ ಸಾಮಾಜಿಕ ಜೀವನದಲ್ಲಿ ಅಪಾರ ಗೌರವ ಗಳಿಸಿದವರು.

ದಶಕಗಳ ನಿರಂತರ ಹೋರಾಟ, ಅಭಿವೃದ್ಧಿ ಬಗ್ಗೆ ಚಿಂತನೆ , ಜನಪರ ಚಳುವಳಿಗಳ ಮೂಲಕ ಬದುಕು ಸಾರ್ಥಕಗೊಳಿಸಿ ಕೊಂಡ ಮಾದೇಗೌಡರು ಗಾಂದೀವಾದವನ್ನು ನಂಬಿದವರು ಹಾಗೂ ಬದುಕಿನುದ್ದಕ್ಕೂ ಅದನ್ನು ಪಾಲಿಸಿದವರು.

ಮಂಡ್ಯದಲ್ಲಿ ಗಾಂಧೀಭವನ, ಗಾಂಧೀಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಸ್ಥಾಪನೆಗೆ ಕಾರಣರಾದವರು. ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ, ಒಂದು ಬಾರಿ ಸಚಿವರಾಗಿ ಅವರು ಅಗಾಧವಾದ ಅನುಭವ ಪಡೆದವರು.

ರೈತರ ಸಂಕಷ್ಟಕ್ಕೆ ಸದಾ ಮಿಡಿಯುತ್ತಿದ್ದರು , ರೈತ ಚಳುವಳಿ ಹಾಗೂ ಕಾವೇರಿ ಹೋರಾಟಗಳಲ್ಲಿ ಅವರು ವಹಿಸಿದ ಪಾತ್ರ ಇತಿಹಾಸದಲ್ಲಿ ಉಳಿಯುವಂತಹದ್ದು, ಅವರ ನಿಧನದಿಂದ ಕರ್ನಾಟಕ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅದ್ಭುತ ಜನಪರ ನಾಯಕನನ್ನು ಕಳೆದುಕೊಂಡಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಭಾವಪೂರ್ಣ ಶ್ರದ್ಧಾಂಜಲಿ 

ಮಾಜಿ ಸಂಸದ, ರೈತ ನಾಯಕ ಜಿ. ಮಾದೇಗೌಡ ಅವರ ನಿಧನಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಕೆ ಎಂ ದೊಡ್ಡಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಾದೇಗೌಡ ಅವರನ್ನು ಭೇಟಿ ಮಾಡಿದ್ದೆ.

ಅವರು ಇಂದು ಕೊನೆಯುಸಿರೆಳೆದಿರುವುದು ನನಗೆ ಬಹಳ ದುಃಖ ತಂದಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಕರುಣಿಸಲಿ ಎಂದು ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.