- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಶ್ಚ ಪಾರಂಪರಿಕ ಕೇಂದ್ರ ಅಭಿವೃದ್ಧಿಯ ಪರಿಕಲ್ಪನೆಯಿಂದ ತುಂಬಿದೆ : ಅರವಿಂದ ಲಿಂಬಾವಳಿ

Limbavali [1]ಬೆಂಗಳೂರು  : ಬಾನಂದೂರಿನಲ್ಲಿ ನಿರ್ಮಾಣಗೊಳ್ಳಲಿರುವ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಬಾನಂದೂರಿನ ಜನರು ಹಾಗೂ ಸಾರ್ವಜನಿಕರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದರು.

ಅವರು ಇಂದು ಬಾನಂದೂರಿನಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರ ಜತೆ ಪಾರಂಪರಿಕ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ವಿಶ್ವ ಪಾರಂಪರಿಕ ಕೇಂದ್ರದ ಪರಿಕಲ್ಪನೆಯ ಸಾಕ್ಷ್ಯ ಚಿತ್ರ ವೀಕ್ಷಿಸಿದ ನಂತರ ಮಾತನಾಡಿದರು. ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಿನಲ್ಲಿ ನಿರ್ಮಾಣವಾಗುತ್ತಿರುವ ಪಾರಂಪರಿಕ ಕೇಂದ್ರ ಉತ್ತಮ ಪ್ರವಾಸಿ ತಾಣವಾಗಬೇಕು. ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜೀವನಚರಿತ್ರೆ ಹಾಗೂ ಅವರು ಮಾಡಿರುವಂತಹ ಸಾಧನೆಯನ್ನು ಪಾರಂಪರಿಕ ಕೇಂದ್ರಕ್ಕೆ ಬರುವ ಪ್ರವಾಸಿಗರು ನೆನಪಿನ ಬುಟ್ಟಿಯಲ್ಲಿ ತುಂಬಿಕೊಂಡು ಹೋಗುವ ರೀತಿ ನಿರ್ಮಾಣ ಮಾಡವ ಸದ್ದುದೇಶ ಇಲಾಖೆಗೆ ಇದೆ ಎಂದರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಮಾಜದ ಬಗ್ಗೆ ಇದ್ದ ವಿಶೇಷ ಕಾಳಜಿ ಸ್ಮರಣೀಯ ಅವರು ಸದಾ ಕಾಲ ಸಮಾಜದ ಕೆಳ ವರ್ಗದ ಜನರ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಅವರು ಆದಿಚುಂಚನಗಿರಿ ಬೆಟ್ಟ ಮಾತ್ರವಲ್ಲ, ಬೆಟ್ಟದ ಸುತ್ತ ಇರುವ ಪ್ರದೇಶವನ್ನು ಸಹ ಅಭಿವೃದ್ಧಿ ಪಡಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೂ ಸಹ ಅವರ ಕೊಡುಗೆ ಅಪಾರ ಸ್ವಾಮೀಜಿ ಅವರು ಸೀಳು ತುಟಿಗಳ ಮಕ್ಕಳ ಉಚಿತ ಚಿಕಿತ್ಸೆಗೆ ಶಿಬಿರ ಆಯೋಜಿಸಿ ಹೊರ ದೇಶಗಳಿಂದ ಚಿಕಿತ್ಸೆ ನೀಡಲು ತಜ್ಞಾರನ್ನು ಕರೆಸುತ್ತಿದ್ದರು ಎಂದರು.

ಪಾರಂಪರಿಕ ಕೇಂದ್ರ ವಿಶ್ವದರ್ಜೆಯಲ್ಲಿ ರೂಪುಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಯೋಜನೆಗೆ 25 ಕೋಟಿ ಅನುದಾನ ನಿಗಧಿ ಮಾಡಿದೆ. ಶ್ರೀ ಶ್ರೀ ಶ್ರೀ ನಿರ್ಮಲನಾಂದ ಸ್ವಾಮೀಜಿ ಅವರು ಇಲ್ಲಿ ನಿರ್ಮಿಸಲು ನೀಡಿರುವ ಪರಿಕಲ್ಪನೆ ನೋಡಿದರೆ 25 ಕೋಟಿ ರೂ. ಅನುದಾನ ಸಾಕಾಗುವುದಿಲ್ಲ ಎಂದು ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.

ಶ್ರೀ ಆದಿಚುಂಚನಗಿರಿ ಮಠದಿಂದ 5 ಕೋಟಿ ಸಸಿಗಳನ್ನು ನೆಟ್ಟಿ ಬೆಳಸುವ‌ ಕಾರ್ಯಕ್ರಮವನ್ನು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕೈಗೆತ್ತಿಕೊಂಡಿದ್ದರು. ಇಂತಹ ಸದ್ದುದೇಶ ಹೊಂದಿರುವ ಕಾರ್ಯಗಳಿಂದ ಕರ್ನಾಟಕದ ಹಸಿರು ಒದಿಕೆ 13% ಯಿಂದ 23% ಕ್ಕೆ ಹೆಚ್ಚಳವಾಗಿದೆ. ಕರೋನ ಸಂದರ್ಭದಲ್ಲಿ ಆಮ್ಲಜನಕವನ್ನು ಖರೀದಿಸುವ ಪರಿಸ್ಥಿತಿ ಬಂದಿದೆ. ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಇಂತಹ ಸಮಾಜಮುಖಿ ಕಾರ್ಯಗಳು ಇಂದಿಗೆ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ರಾಮನಗರ ಮಠಾಧಿಪತಿ ಶ್ರೀ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿ, ಮಾಗಡಿ ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಅ. ದೇವೇಗೌಡ, ಸಿ.ಎಂ.ಲಿಂಗಪ್ಪ, ಎಸ್.ರವಿ, ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಕೆ ಹಾಗೂ ‌ಜಿಲ್ಲಾ ಪಂಚಾಯತ್ ‌ಮುಖ್ಯಕಾರ್ಯನಿರ್ವಹಾಕ ಇಕ್ರಂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.