- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಸ್ಕರ್ ಫೆರ್ನಾಂಡೀಸ್ ಅವರರಿಗೆ ತೀವ್ರ ನಿಗಾ ಘಟಕದಲ್ಲಿಯೇ ಡಯಾಲಿಸಿಸ್ ಚಿಕಿತ್ಸೆ ಆರಂಭಿಸಿದ ವೈದ್ಯರು

Oscar Fernandes [1]ಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡೀಸ್ ಅವರರಿಗೆ ತೀವ್ರ ನಿಗಾ ಘಟಕದಲ್ಲಿಯೇ ಡಯಾಲಿಸಿಸ್ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದು, ಬುಧವಾರ ರಾತ್ರಿಯಿಂದಲೇ ಆರಂಭಿಸಲಾಗಿದೆ.

ಸೋಮವಾರ ಯೋಗ ಮಾಡುವ ವೇಳೆ ಜಾರಿ ಬಿದ್ದಿದ್ದರು. ಈ ವೇಳೆ, ಯಾವುದೇ ಗಾಯಗಳಾಗದೇ ಇರುವುದರಿಂದ ಅದನ್ನು ನಿರ್ಲಕ್ಷ್ಯ ಮಾಡಿದ್ದರು. ಅದೇ ದಿನ ಅವರು ಡಯಾಲಿಸಿಸ್ ಚಿಕಿತ್ಸೆಗೆಂದು ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಪರೀಕ್ಷಿಸಿದಾಗ ಅವರ ತಲೆಯ ಒಳಭಾಗದಲ್ಲಿ ನರಕ್ಕೆ ಗಾಯವಾಗಿ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಕಂಡುಬಂದಿತ್ತು.

ಮರುದಿನ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಗಂಭೀರ ಸ್ಥಿತಿಯಲ್ಲಿರುವ ಅವರಿಗೆ ಡಯಾಲಿಸಿಸ್ ಮಾಡಲು ಸಾಧ್ಯವಾಗಿರಲಿಲ್ಲ. ಬುಧವಾರ ಅವರ ಕೈಯಲ್ಲಿ ಚಲನೆ ಕಂಡು ಬಂದಿದ್ದು, ವೈದ್ಯರು ಅವರಿಗೆ ಡಯಾಲಿಸಿಸ್ ಮಾಡಲು ಮುಂದಾಗಿದ್ದಾರೆ. ಅದರಂತೆ ಬುಧವಾರ ಒಂದು ಹಂತದ ಡಯಾಲಿಸಿಸ್ ನಡೆದಿದೆ. ಡಯಾಲಿಸಿಸ್ ಚಿಕಿತ್ಸೆ ಪೂರ್ಣಗೊಂಡ ನಂತರವೇ ಸರ್ಜರಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆಸ್ಕರ್ ಅವರ ಆರೋಗ್ಯ ವಿಚಾರಿಸಲು ಡಿ.ಕೆ. ಶಿವಕುಮಾರ್ ಇಂದು ಸಂಜೆ ಮಂಗಳೂರಿಗೆ ಆಗಮಿಸಲಿದ್ದಾರೆ. ಜು.23ರಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಐದು ಜಿಲ್ಲೆಗಳ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ರದ್ದುಗೊಂಡಿದೆ ಎಂದು ತಿಳಿದುಬಂದಿದೆ.

ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋಟ್ ಅವರು ಆಸ್ಕರ್ ಕುಟುಂಬಕ್ಕೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೂಡ ದೂರವಾಣಿಯಲ್ಲಿ ಆರೋಗ್ಯ ವಿಚಾರಿಸಿದ್ದರು.