ಉಡುಪಿ : ಬ್ರಹ್ಮಾವರ ಕುಮ್ರಗೋಡಿನ ಫ್ಲ್ಯಾಟ್ ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣದ ಎರಡನೇ ಸುಪಾರಿ ಹಂತಕನ ಖಚಿತ ಸುಳಿವು ಪೊಲೀಸರಿಗೆ ಸಿಕ್ಕಿದ್ದು, ಆತನ ಬಂಧನಕ್ಕೆ ಪೊಲೀಸರು ತೆರಳಿರುವುದಾಗಿ ತಿಳಿದುಬಂದಿದೆ.
ದುಬೈಯಲ್ಲಿದ್ದುಕೊಂಡೇ ಹಂತಕರಿಗೆ ಸುಪಾರಿ ಕೊಟ್ಟು ಉಪ್ಪಿನಕೋಟೆ/ಕುಮ್ರಗೋಡುನ ತನ್ನ ಫ್ಲ್ಯಾಟ್ ನಲ್ಲಿ ಪತ್ನಿ ವಿಶಾಲ ಗಾಣಿಗ (35)ರ ಹತ್ಯೆಯನ್ನು ಮುಗಿಸಿದ್ದ ಪತಿ ರಾಮಕೃಷ್ಣ ಗಾಣಿಗ ನನ್ನು ಬಂಧಿಸಿದ್ದ ಪೊಲೀಸ್ ತಂಡ, ಬಳಿಕ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಒಬ್ಬ ಹಂತಕನನ್ನು ಜು. 19ರಂದು ಬಂಧಿಸಿ ಇಲ್ಲಿಗೆ ಕರೆತಂದಿದೆ.
ಇದೀಗ ಉತ್ತರ ಪ್ರದೇಶದ ಪೊಲೀಸರ ಸಹಕಾರದೊಂದಿಗೆ ಎರಡನೇ ಸುಪಾರಿ ಹಂತಕನ ಬಂಧನಕ್ಕೆ ಬಲೆ ಬೀಸಿದ್ದು, ಜು.23ರೊಳಗೆ ಬಂಧಿಸಿ ಜಿಲ್ಲೆಗೆ ಕರೆದು ತರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರೊಂದಿಗೆ ಸುಪಾರಿ ಹಂತಕರನ್ನು ರಾಮಕೃಷ್ಣ ಗಾಣಿಗನಿಗೆ ಪರಿಚಯಿಸಿದಾತನ ಸುಳಿವು ಕೂಡಾ ಪೊಲೀಸರಿಗೆ ಲಭ್ಯವಾಗಿದೆ. ತನಿಖೆ ದೃಷ್ಟಿಯಿಂದ ಗೌಪ್ಯತೆ ಕಾಪಾಡಿಬೇಕಾಗಿದೆ ಎಂದು ತನಿಖಾಧಿಕಾರಿ ಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗೋರಕ್‌ಪುರದಲ್ಲಿ ಬಂಧಿಸಿ ನಿನ್ನೆ ಜಿಲ್ಲೆಗೆ ಕರೆತರಲಾದ ಸ್ವಾಮಿನಾಥ ನಿಶಾದ (38)ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English