ಮಂಗಳೂರು : ತೀವ್ರ ನಿಗಾ ಘಟಕದಲ್ಲಿ ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸಿಗ ಆಸ್ಕರ್ ಫರ್ನಾಂಡಿಸ್ ಅವರ ಚಿಕಿತ್ಸೆ ಮುಂದುವರೆದಿದ್ದು ಮಂಗಳವಾರ ಮುಂಜಾನೆ ಯಶಸ್ವಿಯಾಗಿ ಶಸ್ತ್ರಕ್ರಿಯೆ ನಡೆಸಲಾಗಿದೆ.
ನಗರದ ಖ್ಯಾತ ನ್ಯೂರೊ ಸರ್ಜನ್ ಡಾ.ಸುನಿಲ್ ಶೆಟ್ಟಿ ಹಾಗೂ ಅವರ ತಂಡ ಆಸ್ಕರ್ ಅವರ ಮಿದುಳಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ತೆಗೆಯುವಲ್ಲಿ ಯಶಸ್ವಿಯಾಗಿದೆ.
ಸೋಮವಾರ ಮಧ್ಯರಾತ್ರಿ 12.30 ರಿಂದಲೇ ಶಸ್ತ್ರಕ್ರಿಯೆ ಪ್ರಾರಂಭಿಸಿದ್ದು ಮಂಗಳವಾರ ಮುಂಜಾನೆ 4.40 ರ ವರೆಗೂ ನಡೆದಿದೆ. ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ಬಿ.ರಮಾನಾಥ ರೈ, ಪ್ರತಾಪಚಂದ್ರ ಶೆಟ್ಟಿ, ವಿನಯ ಕುಮಾರ್ ಸೊರಕೆ, ಪಿ.ವಿ.ಮೋಹನ್, ಅಶೋಕ್ ಕೊಡವೂರು ಮುಂತಾದವರು ಆಸ್ಪತ್ರೆಯಲ್ಲೇ ಶಸ್ತ್ರಕ್ರಿಯೆ ಪೂರ್ಣಗೊಳ್ಳುವ ವರೆಗೂ ಇದ್ದರು.
ಕಳೆದ ಸೋಮವಾರ ಮನೆಯಲ್ಲಿ ದೈಹಿಕ ವ್ಯಾಯಾಮ ಮಾಡುವ ವೇಳೆ ಬಿದ್ದಿದ್ದ ಆಸ್ಕರ್ ಅಂದು ಸಂಜೆ ವೈದ್ಯಕೀಯ ತಪಾಸಣೆ ವೇಳೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ಆ ಬಳಿಕ ಆಸ್ಕರ್ ಅವರು ಪ್ರಜ್ಞಾಶೂನ್ಯರಾಗಿದ್ದರು.
ಯೆನಪೊಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನಡೆದಿದ್ದು, ಪ್ರಜ್ಞೆ ಮರಳಲು ವೈದ್ಯರು ಕಾಯುತ್ತಿದ್ದರು. ಇದುವರೆಗೆ ಪ್ರಜ್ಞೆ ಮರಳದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅವರಿಗೆ ಶಸ್ತ್ರಕ್ರಿಯೆ ಕೈಗೊಳ್ಳಲು ತೀರ್ಮಾನಿಸಲಾಯಿತು. ಶಸ್ತ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು ಇನ್ನೊಂದು ವಾರದಲ್ಲಿ ಆಸ್ಕರ್ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
Click this button or press Ctrl+G to toggle between Kannada and English