- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರತಿಭಾವಂತ ಕಬಡ್ಡಿ ಅಭ್ಯರ್ಥಿಗಳಿಗೆ ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಉಚಿತ ಪ್ರವೇಶ

Shakthi-PU [1]ಮಂಗಳೂರು : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ವಾಣಿಜ್ಯ ವಿಭಾಗಕ್ಕೆ ಉಚಿತ ಪ್ರವೇಶ ಪಡೆಯಲು ಕಬಡ್ಡಿಯ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ದ.ಕ ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿಯವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಾವು ಸ್ವಯಂ ಶಿಸ್ತನ್ನು ಹೊಂದಿದ್ದರೆ ನಾವು ನಮ್ಮ ಯಶಸ್ಸಿಗೆ ಕಾರಣವಾಗುತ್ತೇವೆ. ನಮ್ಮ ಆಲೋಚನೆಗಳು ಮತ್ತು ನಡವಳಿಕೆಗಳು ಹಾಗೂ ಪರಿಶ್ರಮವು ನಮಗೆ ಸರಿಯಾದ ಪ್ರತಿಫಲವನ್ನು ನೀಡುತ್ತದೆ. ಕಬಡ್ಡಿ ಆಟದಿಂದ ಶಕ್ತಿ ಮತ್ತು ಆಂತರಿಕ ಶಕ್ತಿ ಹೊಂದಲು ಕಬಡ್ಡಿ ಆಟಗಾರರಿಗೆ ಅನುಕೂಲವಾಗುತ್ತದೆ. ಸರಳತೆ ಮತ್ತು ಸಾರ್ವಜನಿಕ ಆಕರ್ಷಣೆಯಿಂದಾಗಿ ಕಬಡ್ಡಿ ಆಟವು ಜನಸಾಮಾನ್ಯರ ಶಿಸ್ತಿನ ಆಟವಾಗಿದೆ. ಅಧ್ಯಯನದ ಜೊತೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಅಸಾಧಾರಣ ಪ್ರಯತ್ನಗಳಿಂದ ಉತ್ತಮ ಸಾಧನೆ ಮಾಡಬಹುದು. ಪ್ರತಿ ವರ್ಷ ಕನಿಷ್ಠ ಒಬ್ಬರು ಅಥವಾ ಇಬ್ಬರು ವಿದ್ಯಾರ್ಥಿಗಳು ಶಕ್ತಿ ಪಪೂ ಕಾಲೇಜಿನಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಲು ಅರ್ಹರಾಗಿರಬೇಕೆಂದು ಅವರು ಹೇಳಿದರು.

Shakthi-PU [2]ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ರಾಜರಾಮ್ ರಾವ್ ಅವರು ಶಕ್ತಿ ಶಿಕ್ಷಣ ಸಂಸ್ಥೆಯು ಕಬಡ್ಡಿಯಲ್ಲಿ ಉಚಿತ ಶಿಕ್ಷಣ ಮತ್ತು ಉಚಿತ ತರಬೇತಿಯನ್ನು ನೀಡುವ ಕುರಿತಂತೆ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವ ಸಂಸ್ಥೆಯ ತೀರ್ಮಾನವನ್ನು ಪ್ರಶಂಸಿದರು. ಉತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡುವುದರ ಜೊತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ತರುವುದರ ಮೂಲಕ ಶಕ್ತಿ ವಿದ್ಯಾ ಸಂಸ್ಥೆಯ ಕಲ್ಪನೆ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಗೆಲುವು ಮತ್ತು ಸೋಲು ಆಟದ ಒಂದು ಭಾಗ ಮತ್ತು ಜೀವನಕ್ಕೆ ಒಂದು ಪಾಠ, ಆದ್ದರಿಂದ ಫಲಿತಾಂಶವನ್ನು ಸರಿಯಾದ ಮನೋಭಾವದಿಂದ ಸ್ವೀಕರಿಸಿ ಎಂದು ಅವರು ಹೇಳಿದರು.

ಶಕ್ತಿ ಪ ಪೂ ಕಾಲೇಜಿನ ದೈಹಿಕ ನಿರ್ದೇಶಕರು ಮತ್ತು ಕಬಡ್ಡಿ ತರಬೇತುದಾರರಾದ ಆಕಾಶ್ ಶೆಟ್ಟಿ ಅವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಬಡ್ಡಿಯು ನಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ. ದಾಳಿಯ ಮಾರ್ಗವನ್ನು ನೋಡಿ ಅವರನ್ನು ಹಿಮ್ಮೆಟ್ಟುವಿಕೆಯ ಅಗತ್ಯ ಕೌಶಲ್ಯವನ್ನು ಮಾನದಂಡವಾಗಿಟ್ಟುಕೊಂಡು  ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.

ಒಟ್ಟು ರಾಜ್ಯದ ವಿವಿಧ ಜಿಲ್ಲೆಗಳ 100ಕ್ಕೂ ಅಧಿಕ ಕಬಡ್ಡಿ ಪ್ರತಿಭೆಗಳು ಭಾಗವಹಿಸಿದರು. ದೈಹಿಕ ಶಿಕ್ಷಕಿ ಸುರೇಖಾ, ರಾಜೇಶ್ ಖಾರ್ವಿ, ಹರ್ಷಿತ್, ಪ್ರಕಾಶ್ ಮತ್ತು ಶಿವಪ್ರಸಾದ್ ತಂಡಕ್ಕೆ ಸಹಕಾರವನ್ನು ನೀಡಿದರು.

ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ ನಾಯ್ಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಕೃತ ಅಧ್ಯಾಪಕರಾದ ಶ್ರೀವರ ಪ್ರಾರ್ಥಿಸಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶಿಲ್ಪಾ ನಿರೂಪಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯ ಜ್ಯೋತಿ ಸ್ವಾಗತಿಸಿ, ಅರ್ಥಶಾಸ್ತç ಉಪನ್ಯಾಸಕಿ ಪ್ರೀತಿ ಕೀಕನ್ ವಂದಿಸಿದರು.