- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೋವಿಡ್ ಸೋಂಕು ನಿಯಂತ್ರಿಸಲು ಕಠಿಣಾತಿ ಕಠಿಣ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗಳ ಸೂಚನೆ

Basavaraaja Bommai [1]ಮಂಗಳೂರು : ಕೋವಿಡ್-19 ಸೋಂಕು ನಿರ್ವಹಣೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಉಪಯುಕ್ತ ಕ್ರಮಗಳಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರನ್ನು ಅಭಿನಂದಿಸಿದರು.

ಕೋವಿಡ್‍ಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅತ್ಯಂತ ಅಗತ್ಯವಿರುವ ಪ್ರಾಣವಾಯು ವೈದ್ಯಕೀಯ ಆಮ್ಲಜನಕದ 17 ಘಟಕಗಳು ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು, ಅವುಗಳಲ್ಲಿ ಈಗಾಗಲೇ 8 ಆಮ್ಲಜನಕ ಘಟಕಗಳ ಅನುಷ್ಠಾನ ಕಾರ್ಯ ಪೂರ್ಣಗೊಂಡಿದೆ, ಉಳಿದ ಘಟಕಗಳನ್ನು ಮುಂದಿನ 2 ವಾರಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಡಿಸಿ ಡಾ.ರಾಜೇಂದ್ರ ಅವರ ಕೆಲಸಕ್ಕೆ ಅತೀವ ಶ್ಲಾಘನೆ ವ್ಯಕ್ತಪಡಿಸಿದರು.

ಕೊರೋನಾ ನಿರ್ವಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯದ್ದು ಸವಾಲಿನ ಕೆಲಸವೇ ಆಗಿದೆ, ಏಕೆಂದರೆ ನೆರೆಯ ಕೇರಳದಲ್ಲಿ ಇದೀಗ ಕೋವಿಡ್ ಸೋಂಕಿನ ಪ್ರಕರಣಗಳೂ ವ್ಯಾಪಕವಾಗಿವೆ, ಅಲ್ಲಿಂದ ಪ್ರತಿನಿತ್ಯ ಹಲವು ಕಾರ್ಯಗಳಿಗೆ ರಸ್ತೆಯ ಮೂಲಕ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚು, ಆದ ಕಾರಣ ಸೋಂಕು ನಿಯಂತ್ರಿಸಲು ಮುಂಬರುವ 15 ದಿನಗಳ ಕಾಲ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿಗಳು, ಜಿಲ್ಲೆಯ ಗಡಿ ಭಾಗಗಳಲ್ಲಿ ತೆರೆಯಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ಅದಕ್ಕಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ನಿರ್ದೇಶನ ನೀಡಿದರು.

ಗಡಿ ದಾಟುವ ಪ್ರತಿಯೊಬ್ಬರಲ್ಲಿಯೂ ನೆಗೆಟಿವ್ ವರದಿ ಇರಬೇಕು. ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು ಹಾಗೂ ಅವರ ಸಂಪರ್ಕವÀನ್ನು ಪತ್ತೆ ಹಚ್ಚಬೇಕು. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಆಗಮಿಸುವವರಿಗೆ ಪ್ರತಿ 7 ದಿನಕ್ಕೊಮ್ಮೆ ಕಡ್ಡಾಯವಾಗಿ ಕೋವಿಡ್ ತಪಾಸಣಾ ಫಲಿತಾಂಶವನ್ನು ಪರಿಶೀಲಿಸಬೇಕು. ಪ್ರಮುಖವಾಗಿ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಮಾಡಬೇಕು. ಅಲ್ಲಿ ರ್ಯಾಟ್ ಟೆಸ್ಟ್ ಮಾಡಬೇಕು, ಹೆಚ್ಚು ಜನರು ರೈಲಿನ ಮೂಲಕ ಬರುವ ಕಾರಣ ಅಲ್ಲಿ ಕೋವಿಡ್ ಟೆಸ್ಟ್ ಮಾಡುವ ಕೌಂಟರುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದದ್ರೇ ದಂಡ ವಿಧಿಸಬೇಕು, ಮಾಸ್ಕ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಗಡಿ ಭಾಗದ ತಪಾಸಣೆಗೆ ಪ್ರವಾಸ ಕೈಗೊಂಡು ಸ್ಥಿತಿ-ಗತಿಗಳನ್ನು ಅವಲೋಕಿಸುವುದಾಗಿಯೂ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿರುವ ವಿಡಿಯೋ ಕಾನ್ಪರೆನ್ಸ್ ಹಾಲ್‍ನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಬರುವ ಒಂದು ವಾರ ಕೇರಳ ರಾಜ್ಯದ ಕಾಸರಗೋಡಿಗೆ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ, ಅಲ್ಲಿಂದ ಬಂದಂತಹ ವಿದ್ಯಾರ್ಥಿಗಳನ್ನು ಒಂದು ವಾರ ಕ್ವಾರಂಟೈನ್ ಮಾಡಲಾಗುತ್ತದೆ, ಜಿಲ್ಲೆಯಲ್ಲಿ ಗಡಿ ಭಾಗದಲ್ಲಿ 12 ಕಡೆ ಚೆಕ್‍ಪೋಸ್ಟ್ ರಚಿಸಲಾಗಿದೆ, ಅದರಲ್ಲಿ 6 ರಸ್ತೆ ಹಾಗೂ 6 ರೈಲ್ವೇ ಸ್ಟೇಷನ್‍ಗಳಲ್ಲಿ, ಅವುಗಳಲ್ಲಿ ತಲಪಾಡಿ ಚೆಕ್‍ಪೋಸ್ಟ್ ಅತಿ ಮುಖ್ಯವಾದದ್ದಾಗಿದೆ, ಅಲ್ಲಿ 24/7 ಕಾಲ ತಪಾಸಣೆ ಮಾಡಲಾಗುತ್ತಿದೆ. ವೈದ್ಯಕೀಯ ತುರ್ತು ಸೇವೆಗೆ ಹೊರತು ಪಡಿಸಿ, ಇತರೆ ಸಂಚಾರವನ್ನು ನಿಷೇಧಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್,  ಜಿಲ್ಲಾ ಪೊಲೀಸ್  ವರಿಷ್ಠಾಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತ ಮದನ್ ಮೋಹನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್‍ನಲ್ಲಿದ್ದರು.

ಜುಲೈ 31 ರ ಶನಿವಾರದಂದು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ “ಕೋವಿಡ್-19 ನಿರ್ವಹಣೆ” ಗೆ ಸಂಬಂಧಿಸಿದಂತೆ ಬೆಂಗಳೂರು ನಗರ, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು ಮತ್ತು ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಪೊಲೀಸ್  ವರಿಷ್ಠಾಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.