- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ಬಂದವರು, ಬಿಜೆಪಿಯ ಕೆಲವು ನಾಯಕರಿಗೆ ಒಳಗೊಳಗೇ ಅಸಮಾಧಾನ !

Basavaraja Bommai [1]ಬೆಂಗಳೂರು : ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಗಳಾಗಿರುವುದು ಎಂದು ಮಾಜಿ ಸಚಿವ ಹೆಚ್‌ಡಿ.ರೇವಣ್ಣ ಹೇಳಿದ ಬಳಿಕ ಸಂಘ ಪರಿವಾರದ ಹಿನ್ನೆಲೆ ಇರುವ ಕೆಲವು ಬಿಜೆಪಿ ಮುಖಂಡರಿಗೆ ಮುಜುಗರ ಉಂಟುಮಾಡಿದೆ.

ಅಷ್ಟರವರೆಗೆ ಬಸವರಾಜ ಬೊಮ್ಮಾಯಿ ಹೊರಗಿನವರು ಎಂಬ ಭಾವನೆ ಇರಲಿಲ್ಲ. ಜೆಡಿಯಸ್ ನವರು ಈ ರೀತಿ ಹೇಳುತ್ತಿರುವುದರಿಂದ ಸಂಘ ಪರಿವಾರದವರಿಗೆ ‘ನಮ್ಮ ಕೈಗೆ ಬಂದ ಅಧಿಕಾರ ಜನತಾ ಪರಿವಾರದ ಮೂಲದವನ ಬಾಯಿಗೆ ಬಿತ್ತಲ್ಲಾ ಎಂಬ ಭಾವನೆ ಕಾಡತೊಡಗಿದೆ.

ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಮೊದಲ ಬಾರಿಗೆ ದೆಹಲಿಗೆ ಹೋಗಿದ್ದ ವೇಳೆ ಸಿಎಂ ರೇಸಿನಲ್ಲಿದ್ದ ಸಿ.ಟಿ. ರವಿ ಮತ್ತು ಅರವಿಂದ ಬೆಲ್ಲದ್ ಕೂಡ ದೆಹಲಿಯಲ್ಲೇ ಇದ್ದರು. ಆದರೆ ಒಮ್ಮೆಯೂ ಸಿ.ಟಿ. ರವಿ ಸಿಎಂ ಭೇಟಿಯಾಗಲು ಪ್ರಯತ್ನಿಸಲಿಲ್ಲ. ಸದಾ ಪಕ್ಷದ ಶಿಸ್ತಿನ ಬಗ್ಗೆ ಪಾಠ ಮಾಡುವ ಸಿ.ಟಿ. ರವಿಗೆ ತಮ್ಮದೇ ಪಕ್ಷದ ಸಿಎಂ ಅನ್ನು ಸೌಜನ್ಯಕ್ಕಾದರೂ ಭೇಟಿ ಮಾಡಲಿಲ್ಲ ಎಂಬುದು ಅವರ ಅಸಮಾಧಾನವನ್ನು ಸೂಚಿಸಿತ್ತು.

ಇತ್ತ ಬಿಎಸ್‌ವೈ ರಾಜೀನಾಮೆ ನಂತರ ಹೈಕಮಾಂಡ್, ಮೂಲ ಬಿಜೆಪಿಗ, ಪಕ್ಷವನ್ನು ಕಟ್ಟಿ ಬೆಳೆಸಿದ ಹಾಗೂ ಸಂಘ ಪರಿವಾರದಿಂದ ಬಂದವರನ್ನು ಮುಂದಿನ ಸಿಎಂ ಮಾಡುತ್ತೆ ಎಂದು ಎಲ್ಲರೂ ನಿರೀಕ್ಷೆ ಇಟ್ಟಿದ್ದರು.

ಬಸವರಾಜ ಬೊಮ್ಮಾಯಿ ಅವರು ಜನತಾ ಪರಿವಾರ ಬಿಟ್ಟು ಬಿಜೆಪಿಗೆ ಬರಲು ಸಿಎಂ ಉದಾಸಿ ಕಾರಣೀಭೂತ. ಜನತಾ ಪರಿವಾರದಿಂದ ಬಂದ ಬೊಮ್ಮಾಯಿ ಅವರಿಗೆ ಮಣೆ ಹಾಕಿರುವುದು ಹಲವರಿಗೆ ಅಚ್ಚರಿಯಾಗಿದೆ.

ಇವರ ತಂದೆ ಎಸ್.‌ಆರ್ ಬೊಮ್ಮಾಯಿ ಜನತಾ ಪರಿವಾರದಿಂದಲೇ ಒಂಬತ್ತು ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಜನತಾ ಪರಿವಾರದಿಂದ ಬಿಜೆಪಿಗೆ ಬಂದ ಬಸವರಾಜ ಬೊಮ್ಮಾಯಿ ಯಾವತ್ತೂ ಸಂಘದ ಹಿಂದುತ್ವ ನಿಲುವಿನಲ್ಲಿ ಬಹಿರಂಗವಾಗಿ ನಡೆದುಕೊಂಡವರಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ಸಾಕಷ್ಟು ಮುಸ್ಲಿಂಮರು ರಾಜಭವನಕ್ಕೆ ಆಗಮಿಸಿದ್ದದ್ದು ಇದಕ್ಕೆ ಸಾಕ್ಷಿಯಾಗಿತ್ತು.

ಯಡಿಯೂರಪ್ಪ ರಾಜೀನಾಮೆ ಬಳಿಕ ಹಿಂದುತ್ವದ ತಲೆಯಾಳುಗಳಿಗೆ ಮಣೆ ಹಾಕುವ ಚಿಂತನೆ ಹೈಕಮಾಂಡ್ ಗೆ ಇತ್ತು. ಈ ಕಾರಣಕ್ಕಾಗಿ ಬಿಎಲ್ ಸಂತೋಷ್, ಪ್ರಹ್ಲಾದ ಜೋಶಿ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಜನತಾಪರಿವಾರ ಬಸವರಾಜ ಬೊಮ್ಮಾಯಿ ಆಯ್ಕೆಗೊಂಡರು.