- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೋವಿಡ್ ನಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ₹1 ಲಕ್ಷ ಪರಿಹಾರ ವಿತರಿಸಿದ ಸಚಿವ ಡಾ.ಕೆ.ಸುಧಾಕರ್

Sudhakar [1]ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ನಿಯಂತ್ರಣದಲ್ಲಿದ್ದು, ಮೂರನೇ ಅಲೆಯ ಆತಂಕವಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನಿಂದ ‘ಆಸರೆ’ ಕಾರ್ಯಕ್ರಮದಡಿ 1 ಲಕ್ಷ ರೂ. ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ನೊಂದ ಕುಟುಂಬಗಳ‌ ಮನೆಗೆ ಭೇಟಿ ಕೊಟ್ಟ ಸಚಿವರು ಪರಿಹಾರದ ಮೊತ್ತವನ್ನು ವಿತರಿಸಿ ಸಾಂತ್ವನ ನೀಡಿದರು.

ಚಿಕ್ಕಬಳ್ಳಾಪುರ ಜನತೆಯ ಆಶೀರ್ವಾದದಿಂದ ಎರಡನೇ ಬಾರಿ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಕೋವಿಡ್ ನಿಯಂತ್ರಿಸುವ ಜವಾಬ್ದಾರಿ ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. 14 ದಿನಗಳಿಂದ ಪಾಸಿಟಿವಿಟಿ ದರ ಎರಡಂಕಿಯನ್ನೂ ದಾಟಿಲ್ಲ. ಮೂರನೇ ಅಲೆ ಆರಂಭದ ಮುನ್ಸೂಚನೆ ಕೆಲ ಜಿಲ್ಲೆಗಳಲ್ಲಿ ಕಂಡುಬರುತ್ತಿದೆ. ಆದರೆ ಅಂತಹ ಆತಂಕ ಚಿಕ್ಕಬಳ್ಳಾಪುರದಲ್ಲಿ ಇಲ್ಲ ಎಂದು ತಿಳಿಸಿದರು.

ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ತಾಲೂಕು ಕೇಂದ್ರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಆಕ್ಸಿಜನ್ ಘಟಕ ನಿರ್ಮಿಸಲಾಗಿದೆ. ಜಿಲ್ಲಾಕೇಂದ್ರದ ಹೊಸ ಆಸ್ಪತ್ರೆ ಹಾಗೂ ಹಳೆ ಆಸ್ಪತ್ರೆಯಲ್ಲಿ ಒಟ್ಟು ಎರಡು ಘಟಕ ಆರಂಭಿಸಲಾಗುತ್ತಿದೆ. ಅದೇ ರೀತಿ ಮಕ್ಕಳ ವಿಶೇಷ ನಿಗಾ ಘಟಕವನ್ನು ಜಿಲ್ಲೆಯಲ್ಲಿ ಆರಂಭಿಸಲು ಸಿದ್ಧತೆ ನಡೆದಿದ್ದು, ಅದಕ್ಕೆ ಬೇಕಾದ ವೆಂಟಿಲೇಟರ್ ಗಳನ್ನು ಒಂದೆರಡು ದಿನಗಳಲ್ಲಿ ನೀಡಲಾಗುವುದು. ವೈದ್ಯರ ನೇರ ನೇಮಕಾತಿ ಮಾಡಿರುವುದರಿಂದ ಶೇ.90 ರಷ್ಟು ವೈದ್ಯರ ಕೊರತೆ ನೀಗಿದೆ ಎಂದರು.

ದೂರದೃಷ್ಟಿಯ ನಾಯಕತ್ವ ಗುಣದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯವನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿಪಡಿಸುವ ಕನಸನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪೂರ್ತಿಯಾಗಿದ್ದಾರೆ. ಈ ಸರ್ಕಾರದಿಂದ ಆರೋಗ್ಯ, ಶಿಕ್ಷಣ, ಕೈಗಾರಿಕೆಯ ಅಭಿವೃದ್ಧಿ, ಬಡವರ ಕಲ್ಯಾಣ, ಉದ್ಯೋಗ ಸೃಷ್ಟಿಯಾಗಲಿದೆ. ಮೊದಲ ದಿನ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿರುವುದೇ ಮುಖ್ಯಮಂತ್ರಿಗಳ ರೈತಪರ ಕಾಳಜಿ ತೋರಿಸಿದೆ. ಅದೇ ರೀತಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಹೆಚ್ಚಳದಿಂದ ಸಾಮಾಜಿಕ ಭದ್ರತೆ ದೊರೆತಿದೆ ಎಂದರು.

ಅಕ್ಕಿ ನೀಡಿದರೆ ಊಟ ಮಾಡಬಹುದು. ಆದರೆ ಮೀನು ಕೊಡುವ ಬದಲು ಮೀನುಗಾರಿಕೆಯನ್ನು ಕಲಿಸಬೇಕು ಎಂಬ ಮಾತಿದೆ. ಹಾಗೆಯೇ ನಮ್ಮ ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಈ ರೀತಿ ಉನ್ನತ ಶಿಕ್ಷಣಕ್ಕೆ 1 ಸಾವಿರ ಕೋಟಿ ರೂ. ವಿದ್ಯಾರ್ಥಿವೇತನ ನೀಡಿರುವ ಬೇರೆ ಉದಾಹರಣೆ ಇಲ್ಲ. ಪರಿಶಿಷ್ಟ ಪಂಗಡದ ಜನರಿಗಾಗಿ ವಿಶೇಷ ಸಚಿವಾಲಯ ರೂಪಿಸಬೇಕೆಂಬ ಬೇಡಿಕೆ ಇದ್ದು, ಅದನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.

ಸಚಿವರು ಹೇಳಿದ ಇತರೆ ಅಂಶಗಳು

ಮುಂದಿನ ಒಂದು ತಿಂಗಳಿಗಾಗಿ ಒಂದೂವರೆ ಕೋಟಿ ಲಸಿಕೆಯ ಬೇಡಿಕೆ ಇಡಲಾಗಿತ್ತು. ಈವರೆಗೆ ರಾಜ್ಯದಲ್ಲಿ 3.9 ಕೋಟಿ ಲಸಿಕೆ ನೀಡಿದ್ದು, ಆಗಸ್ಟ್ ಅಂತ್ಯಕ್ಕೆ 4 ಕೋಟಿ ಹಾಗೂ ಸೆಪ್ಟೆಂಬರ್ ಅಂತ್ಯಕ್ಕೆ ಐದೂವರೆ ಕೋಟಿ ಲಸಿಕೆ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ.

ಯಾವುದೇ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತ ಹೆಚ್ಚಿಲ್ಲ. ಕೇರಳಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಸರ್ಕಾರ ವಹಿಸಿದೆ.

ಸರ್ಕಾರ ಯಾವ ರೀತಿ ಆಡಳಿತ ನೀಡಲಿದೆ ಎಂದು ಬೇಕಿದ್ದರೆ ವಿರೋಧ ಪಕ್ಷದವರು ವ್ಯಾಖ್ಯಾನ ಮಾಡಲಿ.

ಮಂಚೇನಹಳ್ಳಿಗೆ ತಾಯಿ ಮತ್ತು ಮಕ್ಕಳ ಎರಡು ಆಸ್ಪತ್ರೆ ಮಂಜೂರಾಗಿದೆ. ಮಿನಿ ವಿಧಾನಸೌಧ ಮಂಜೂರಾಗಿದೆ.

ಎಲ್ಲ ಶಾಸಕರಿಗೆ ಸಚಿವರಾಗುವ ಅರ್ಹತೆ ಇದೆ. ಪ್ರಾದೇಶಿಕ ಸಮತೋಲನ ನೋಡಿಕೊಂಡು ಸಂಪುಟ ರಚನೆಯಾಗುತ್ತದೆ. ಅವಕಾಶ ವಂಚಿತರಿಗೆ ಮುಂದೆ ಸೂಕ್ತ ಸ್ಥಾನವನ್ನು ಪಕ್ಷ ನೀಡಲಿದೆ.

ನಂದಿ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಜನ ಸೇರದಂತೆ ಕ್ರಮ ವಹಿಸಲಾಗುವುದು.