ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ವಾಹನ ಅಪಘಾತದಲ್ಲಿ ಮೃತರಾಗಿದ್ದರು. ಅವರ ಕುಟುಂಬಕ್ಕೆ ಇದೀಗ 25 ಲಕ್ಷ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದೆ.
ಒಮಾನ್ ದೇಶದ ಮಬೇಲದಲ್ಲಿ 2 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ತೀರಾ ಬಡಕುಟುಂಬದ ಯುವಕ ಬೆಳ್ತಂಗಡಿ ತಾಲೂಕಿನ ಸುನ್ನತ್ ಕೆರೆ ನಿವಾಸಿ ನೂರ್ ಮುಹಮ್ಮದ್ (25) ಅವರು “ಮಸ್ಕತ್ ವಾಟರ್’ ಬಾಟಲಿ ನೀರು ಕಂಪೆನಿಯಲ್ಲಿ ಸೇಲ್ಸ್‌ಮನ್ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. 2019ರ ಮೇ 11ರಂದು ಸಂಭವಿಸಿದ ವಾಹನ ಅಪಘಾತದಲ್ಲಿ ಅವರು ಮತ್ತು ಚಾಲಕ ಒಮಾನ್ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಎರಡೇ ದಿನಗಳಲ್ಲಿ ಊರಿಗೆ ಕಳುಹಿಸಿ ಕೊಡಲು ಸೋಶಿಯಲ್ ಫೋರಮ್ ವ್ಯವಸ್ಥೆ ಮಾಡಿತ್ತು.
ಬಳಿಕ ಸೋಶಿಯಲ್ ಫೋರಮ್ ತಂಡವು ಪರಿಹಾರ ಮೊತ್ತಕ್ಕಾಗಿ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ನಿರಂತರ 2 ವರ್ಷಗಳ ಹೋರಾಟದ ಫಲವಾಗಿ ಇದೀಗ 25 ಲಕ್ಷ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದೆ ಎಂದು ಸೋಶಿಯಲ್ ಫೋರಮ್ ತಿಳಿಸಿದೆ.
ನೂರ್ ಮುಹಮ್ಮದ್ ಅವರ ತಾಯಿ ಕೂಡ ಎರಡು ತಿಂಗಳ ಹಿಂದೆ ನಿಧನ ಹೊಂದಿದ್ದರು. ಇದೀಗ ಕುಟುಂಬದಲ್ಲಿ ತಂದೆ, ಅಣ್ಣ, ಅಕ್ಕ ಇದ್ದು, ಪರಿಹಾರದ ಮೊತ್ತವನ್ನು ಅವರಿಗೆ ಹಸ್ತಾಂತರಿಸಲಾಗಿದೆ.
Click this button or press Ctrl+G to toggle between Kannada and English