- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕ್ಷಯರೋಗ ಪರೀಕ್ಷೆಗೆ ಸ್ವಯಂಪ್ರೇರಿತರಾಗಿ ಮುಂದೆ ಬನ್ನಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

 

Sudhakar [1]ಬೆಂಗಳೂರು :  ಕೋವಿಡ್ ನಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಕ್ಷಯರೋಗ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೋರಿದರು.

ಆಗಸ್ಟ್ 31 ರವರೆಗೆ ನಡೆಯಲಿರುವ ಕ್ಷಯರೋಗ ಪತ್ತೆ ಆಂದೋಲನಕ್ಕೆ ವಿಧಾನಸೌಧದಲ್ಲಿ ಚಾಲನೆ ನೀಡಿ ಸಚಿವರು ಮಾತನಾಡಿದರು. ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಕ್ಷಯರೋಗ ಪತ್ತೆ ಮಾಡುವ ವಿನೂತನ ಕಾರ್ಯಕ್ರಮ ಮಾಡಲಾಗಿದೆ. ರಾಜ್ಯದಲ್ಲಿ 28 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ ನಿಂದ ಗುಣಮುಖರಾಗಿದ್ದು, ಅವರಲ್ಲಿ ಫಾಲೋ ಅಪ್ ಮಾಡಲಾಗುವುದು. ಕೋವಿಡ್ ಶ್ವಾಸಕೋಶಕ್ಕೆ ಹೆಚ್ಚು ಹಾನಿಯುಂಟುಮಾಡುತ್ತದೆ. ಕ್ಷಯ ರೋಗ ಕೂಡ ಶ್ವಾಸಕ್ಕೋಶಕ್ಕೆ ಹಾನಿ ಮಾಡುತ್ತದೆ. ಕ್ಷಯ ನಿಯಂತ್ರಣಕ್ಕಾಗಿ ಈ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ನಿಂದ ಗುಣಮುಖರಾದವರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಕ್ಷಯರೋಗ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಗುರುತಿಸಿದರೆ ಅಗತ್ಯ ಚಿಕಿತ್ಸೆ ಬೇಗ ನೀಡಿ ಗುಣಮುಖರನ್ನಾಗಿಸಬಹುದು ಎಂದು ಮನವಿ ಮಾಡಿದರು.

2017 ರಿಂದ ಆರಂಭಿಸಿ 75 ಲಕ್ಷ ಜನರನ್ನು ಗುರುತಿಸಿ, 88% ಜನರಿಗೆ ಪರೀಕ್ಷೆ ಮಾಡಲಾಗಿದೆ. 3.9% ಜನರಲ್ಲಿ ಕ್ಷಯ ಪತ್ತೆಯಾಗಿದೆ. ಅದೇ ರೀತಿ 2019, 2020 ರಲ್ಲೂ ಮಾಡಲಾಗಿದೆ. ಕೋವಿಡ್ ನಿಂದಾಗಿ ಕ್ಷಯರೋಗ ಪತ್ತೆ ಪರೀಕ್ಷೆ ಕಡಿಮೆಯಾಗಿದೆ. 2025 ರ ವೇಳೆಗೆ ಕ್ಷಯರೋಗ ಮುಕ್ತ ಮಾಡುವ ಗುರಿಯನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದರು.

ಆರೋಗ್ಯ ನಂದನ

ಕೋವಿಡ್ 3 ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ, ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದಲ್ಲಿ ಒಂದೂವರೆ ಕೋಟಿ ಮಕ್ಕಳಿದ್ದು, ಎಲ್ಲರಿಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ‘ಆರೋಗ್ಯ ನಂದನ’ಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಯೋಜನೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿ, ಪೌಷ್ಠಿಕ ಆಹಾರ ನೀಡಲಾಗುವುದು. ಮುನ್ನೆಚ್ಚರಿಕೆ ಕ್ರಮ ವಹಿಸಿ ಮಕ್ಕಳ ಆರೋಗ್ಯ ಸುಧಾರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಲಸಿಕೆಗೆ ಮನವಿ

ರಾಜ್ಯದಲ್ಲಿ ಡಿಸೆಂಬರ್ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ. ದೆಹಲಿಗೆ ಪ್ರವಾಸ ಮಾಡಿ ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಿ ಹೆಚ್ಚು ಲಸಿಕೆ ಬೇಡಿಕೆ ಇಡಲಾಗುವುದು. ಶೇ.25 ರಷ್ಟು ಲಸಿಕೆಯನ್ನು ಖಾಸಗಿ ಕ್ಷೇತ್ರ ನೀಡಬಹುದು. ಕಂಪನಿಗಳು ಸಿಎಸ್ ಆರ್ ನಡಿ ಲಸಿಕೆ ಖರೀದಿಸಿ ಸರ್ಕಾರಕ್ಕೆ ನೀಡಿ ಎಂದು ಮನವಿ ಮಾಡಲಾಗುತ್ತಿದೆ. ಇದರಿಂದ ಲಸಿಕೆ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಿ ವೇಗವಾಗಿ ನೀಡಲು ಸಾಧ್ಯವಾಗುತ್ತದೆ ಎಂದರು.

ಮಂಗಳೂರಿನಲ್ಲಿ ಕೋವಿಡ್ ಸೋಂಕಿತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್ ಸೋಂಕು ಬಂದರೆ ಗುಣಮುಖರಾಗಬಹುದು. ಇದಕ್ಕಾಗಿ ಜೀವನ ಕೊನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.