- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಾಲೆಗಳನ್ನು ತೆರೆಯಲು ಎಲ್ಲಾ ಸುರಕ್ಷತೆಗಳನ್ನ ತೆಗೆದುಕೊಳ್ಳಲಾಗಿದೆ: ಆರ್ ಅಶೋಕ

R Ashoka [1]

ಬೆಂಗಳೂರು  : ಸರ್ಕಾರ ಆಗಸ್ಟ್ 23ರಿಂದ ಭೌತಿಕವಾಗಿ ಒಂಬತ್ತು ಮತ್ತು ಹತ್ತನೇ ತರಗತಿಗಳನ್ನ ಆರಂಭಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಕೈಗೊಂಡಿರುವ ತಯಾರಿಗಳ ಕುರಿತು ಕಂದಾಯ ಸಚಿವ ಆರ್ ಅಶೋಕ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು,”ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಗಳನ್ನು ತೆರೆಯುತ್ತದೆ. ಶಾಲೆಗಳಿಂದ ಕೋವಿಡ್ ಹರಡದಂತೆ ತಡೆಯಲು ಅಗತ್ಯವಿರುವ ಎಲ್ಲ ತಯಾರಿಗಳನ್ನ ಈಗಾಗಲೇ ಮಾಡಿಕೊಳ್ಳಲಾಗಿದೆ. ಶಾಲಾ ತರಗತಿಗಳಲ್ಲಿ ಮತ್ತು ಆವರಣಗಳಲ್ಲಿ ಕೋವಿಡ್ ನಿಯಮಾವಳಿಗಳನ್ನ ಕಡ್ಡಾಯವಾಗಿ ಪಾಲಿಸಲು ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತುಂಬ ಯೋಚಿಸಿ ಈ ಸವಾಲಿನ ನಿರ್ಧಾರವನ್ನ ಸರ್ಕಾರ ಕೈಗೊಂಡಿದೆ. ಸೋಮವಾರದಿಂದ ಶಾಲೆಗಳು ಆರಂಭವಾಗಲಿದ್ದು, ಇದರ ಸಾಧಕ, ಬಾಧಕಗಳ ಮೇಲೆ ಮುಂದಿನ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಏಳು, ಎಂಟನೇ ತರಗತಿಗಳನ್ನು ಕೂಡಾ ತೆರೆಯಲು ಇದು ನೆರವಾಗಲಿದೆ ಎಂದರು.

ಮಾಸ್ಕ್ ಕುರಿತಂತೆ ಮಾರ್ಷಲ್ ಗಳ ಕಿರಿಕಿರಿ, ರಾಜಕಾರಣಿಗಳು ಮಾಸ್ಕ್ ಹಾಕಿದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶೋಕ,”ಮಾಸ್ಕ್ ಕಡ್ಡಾಯವಾಗಿದ್ದು, ನಮ್ಮ ಮತ್ತು ಇತರರ ಸುರಕ್ಷತೆಗೆ ಧರಿಸಲೇಬೇಕು. ಇದರಲ್ಲಿ ಯಾವುದೇ ಬೇಧ, ಭಾವ ಇಲ್ಲ. ರಾಜಕಾರಣಿಗಳು, ಅಧಿಕಾರಿಗಳು, ಜನಸಾಮಾನ್ಯರು ಯಾರಾದರೂ ಸರಿಯೇ ಮಾಸ್ಕ್ ಧರಿಸುವುದು ಕಡ್ಡಾಯ. ಅದರಲ್ಲಿ ಯಾವ ವಿನಾಯಿತಿಯೂ ಇಲ್ಲ. ತಪ್ಪಿದ್ದಲ್ಲಿ ಖಂಡಿತಾ ದಂಡ ಹಾಕಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ಕಿಟ್ ವಿತರಣೆ:
ಕಂದಾಯ ಸಚಿವರು ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾದ ಮೆಕ್ಯಾನಿಕ್ ಗಳು, ಇಸ್ತ್ರಿ ಮಾಡುವವರು, ಸಣ್ಣ ವ್ಯಾಪಾರಿಗಳಿಗೆ ದಿನಸಿ ಕಿಟ್ ಗಳನ್ನು ಶಾಸಕರ ಕಚೇರಿ ಆವರಣದಲ್ಲಿ ವಿತರಿಸಿದರು.