- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೋವಿಡ್ ನಮಗೆ ಅತ್ಯುತ್ತಮ ಪಾಠ ಕಲಿಸಿದೆ:ಸಚಿವ ಆರ್ ಅಶೋಕ

R Ashoka [1]ಬೆಂಗಳೂರು  : ಕಂದಾಯ ಸಚಿವ ಆರ್ ಅಶೋಕ್ ಅವರು ನಗರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 1೦೦ ಕ್ಕೂ ಅಧಿಕ ವೈದ್ಯರುಗಳಿಗೆ ಸನ್ಮಾನ ಮಾಡಿದರು.

ಈ ವೇಳೆ ಮಾತನಾಡಿದ ಸಚಿವರು,”ನಾವು ಈ ರೀತಿಯ ಸಂಕಷ್ಟವೊಂದನ್ನ ಎದುರಿಸಬೇಕಾದಂತಹ ಸಂದರ್ಭ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೋವಿಡ್ ಎಲ್ಲವನ್ನು ಬದಲಿಸಿ ಹಾಕಿದೆ. ಕೋವಿಡ್ ನ ಘೋರತೆ ನೆನೆಸಿಕೊಂಡರೆ ಆಂಬ್ಯೂಲೆನ್ಸ್ ಸೈರನ್ ಸದ್ದು ಮತ್ತು ಶವಗಳನ್ನ ಸುಡುವ ಚಿತ್ರಗಳೇ ಕಣ್ ಮುಂದೆ ಸುಳಿಯುತ್ತವೆ. ಕೋವಿಡ್ ನಿಂದಾಗಿ ಬದುಕು ಅಂತಂತ್ರವಾಗಿದೆ ಎಂದೆನಿಸಬಹುದು. ಆದರೆ ಕೆಲ ಪಾಠಗಳನ್ನು ಕೂಡಾ ಅದು ಕಲಿಸಿದೆ. ಉದ್ದನೆಯ ಸಾಲಿನಲ್ಲಿ ನಿಲ್ಲುವುದು ಮತ್ತು ಜೀವನದ ಬಗ್ಗೆ ಶಿಸ್ತು ಬೆಳೆಸಿಕೊಳ್ಳುವುದನ್ನ ಕೋವಿಡ್ ಹೇಳಿಕೊಟ್ಟಿದೆ. ಒಂದೊಮ್ಮೆ ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದ ಸಂದರ್ಭಗಳಲ್ಲಿ, ವೈದ್ಯರು ರೋಗಿಗಳ ಚಿಕಿತ್ಸೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು. ಅಂದು, ಇಂದು ನಮಗಿರುವ ಏಕೈಕ ಭರವಸೆಯೆಂದರೆ ಅದು ವೈದ್ಯರು ಮಾತ್ರ. ಹೀಗಾಗಿ ನಾನು ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಪೌರಕಾರ್ಮಿಕರಿಗೂ ಧನ್ಯವಾದಗಳನ್ನ ಸಲ್ಲಿಸಲು ಇಚ್ಛಿಸುತ್ತೇನೆ. ಕಾರಣ ಅವರು ನಗರದ ಸ್ವಚ್ಛತೆಗೆ ಎರಡು ಅಲೆಯ ವೇಳೆಯಲ್ಲಿಯೂ ಕಟಿಬದ್ಧರಾಗಿ ನಿಂತರು,” ಎಂದು ಕೊಂಡಾಡಿದರು.

ಈ ವೇಳೆ ಸಚಿವ ಅಶೋಕ್ ಸಾಮಾಜಿಕ ಕಾರ್ಯಗಳನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಲು ಇಚ್ಛಿಸುವ ವೈದ್ಯರನ್ನು ಸೇರಿದಂತೆ ಹಲವು ವಲಯಗಳ ವ್ಯಕ್ತಿಗಳಿಗೆ ತಮ್ಮ ಜೊತೆ ಕೈ ಜೋಡಿಸುವಂತೆ ಕರೆ ನೀಡಿದರು.