- Mega Media News Kannada - https://kannada.megamedianews.com -

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪುತ್ರಿ ಮದುವೆಯಲ್ಲಿ ರಾಷ್ಟ್ರ, ರಾಜ್ಯ ನಾಯಕರು

Prahlad Joshi [1]ಹುಬ್ಬಳ್ಳಿ:  ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪುತ್ರಿ ಅರ್ಪಿತಾ ಹಾಗೂ ಹೃಷಿಕೇಶ್ ಮದುವೆ ಇಲ್ಲಿನ ಡೆನಿಸನ್ಸ್ ಹೋಟೆಲ್‌ನಲ್ಲಿ ಬುಧವಾರ ಅದ್ಧೂರಿಯಾಗಿ ನಡೆಯಿತು.  ಸಮಾರಂಭದಲ್ಲಿ ರಾಷ್ಟ್ರ, ರಾಜ್ಯ ನಾಯಕ ರು ಭಾಗವಹಿಸಿ ಶುಭ ಹಾರೈಸಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್, ಕೇಂದ್ರ ಸಚಿವರಾದ ಡಿ.ರಾವ್‌ಸಾಹೇಬ್ ದಾದಾರಾವ್‌, ಅರ್ಜುನ್‌ ರಾಮಪಾಲ್‌ ಮೇಘ್ವಾಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್‌. ಅಶೋಕ್, ಹಾಲಪ್ಪ ಆಚಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮತ್ತಿತರರು ಪಾಲ್ಗೊಂಡಿದ್ದರು.

ಗುರವಾರ ಸಂಜೆ ನಡೆಯುವ ಆರತಕ್ಷತೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್‌ ಷಾ, ಪಿಯೂಷ್‌ ಗೋಯಲ್‌, ನಿತಿನ್‌ ಗಡ್ಕರಿ, ಧರ್ಮೇಂದ್ರ ಪ್ರಧಾನ, ರಾಜೀವ್ ಚಂದ್ರಶೇಖರ್, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆಗೆ ಸೆ.3 ರಂದು ನಡೆಯಲಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಮತದಾರರಲ್ಲದ ರಾಜಕೀಯ ನಾಯಕರು ಹುಬ್ಬಳ್ಳಿಗೆ ಬರುವಂತಿಲ್ಲ ಎಂದಿದ್ದರೂ, ಮದುವೆಯಲ್ಲಿ ಭಾಗವಹಿಸುತ್ತಿರುವುದಕ್ಕೆ, ಕೋವಿಡ್‌ ನಿಯಮಾವಳಿ ಉಲ್ಲಂಘನೆಯಾಗುತ್ತಿರುವ ಬಗೆಗೂ ಸಾರ್ವಜನಿಕ ಚರ್ಚೆಯಾಗುತ್ತಿದೆ.

ನೀತಿ ಸಂಹಿತೆ ಉಲ್ಲಂಘನೆ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಹಾಗಾಗಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದರು.

Prahlad Joshi [2]

ನೀತಿ ಸಂಹಿತೆಯ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ ನಿವಾಸಿಯಾಗಿದ್ದಾರೆ. ಅವರ ಸ್ವಂತ ಮನೆಯೂ ಇಲ್ಲಿಯೇ ಇದ್ದು, ಮತದಾನದ ಹಕ್ಕು ಹೊಂದಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬಂದವರು ವಾಸ್ತವ್ಯ ಹೂಡುವಂತಿಲ್ಲ ಎಂದು ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಹಲವು ಸಚಿವರು ಬರುತ್ತಿದ್ದು, ಯಾರೂ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿಲ್ಲ. ಬಹಿರಂಗ ಪ್ರಚಾರವೂ ಈಗಾಗಲೇ ಅಂತ್ಯ ಕಂಡಿದೆ’ ಎಂದು ತಿಳಿಸಿದರು.