- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವೃದ್ಧಾಪ್ಯ ಪಿಂಚಣಿ ಫಲಾನುಭವಿಗಳ ಮನೆ ಬಾಗಿಲಿಗೆ: ಕಂದಾಯ ಸಚಿವ ಅಶೋಕ

R Ashok [1]ಹೊಸದುರ್ಗ  : ತಾಲ್ಲೂಕು ಕಚೇರಿಗೆ ವೃದ್ಧರು, ವಿಧವೆಯರು, ಬಡವರು ನಿತ್ಯ ಅಲೆಯುತ್ತಾರೆ. ಅವರ ಕೆಲಸಗಳೆಲ್ಲಾ ಸರಾಗವಾಗಿ ಆಗುವಂತೆ ಆಗಬೇಕು. ಅವರಿಗೆಲ್ಲಾ ಸೌಲಭ್ಯಗಳು ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇರಿಸುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

“ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ರೂ.10ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಮಿನಿ ವಿಧಾನಸೌಧಕ್ಕೆ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಜಿಲ್ಲಾಡಳಿತ ಹಳ್ಳಿಗೆ ಹೋಗುವಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರೂಪಿಸಿದ್ದೇವೆ. ಆಧಾರ್ ಕಾರ್ಡ್ ನಲ್ಲಿ 60 ವರ್ಷ ಆದವರಿಗೆ ಫಲಾನುಭವಿಗಳ ಮನೆಗೆ ಹೋಗಿ ಸಂಬಂಧಿಸಿದ ಅಧಿಕಾರಿಗಳು ವೃದ್ಧಾಪ್ಯ ವೇತನ ಪತ್ರ ನೀಡುವಂತೆ ಮಾಡಲಾಗಿದೆ. ಈಗಾಗಲೇ 30 ಸಾವಿರ ಜನರಿಗೆ ನೀಡಲಾಗಿದೆ” ಎಂದು ತಿಳಿಸಿದರು.

ಇದೇ ವೇಳೆ ಸಚಿವರು, “ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ಯಾರೂ ಅರ್ಜಿ ಹಿಡಿದುಕೊಂಡು ನಿಲ್ಲುವಂತೆ ಆಗಬಾರದು. ಅಧಿಕಾರಿಗಳು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಹಕ್ಕು ಪತ್ರ, ವೇತನ ನೀಡಬೇಕು”, ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಫಲಾನುಭವಿಗಳಿಗೆ ಹಕ್ಕುಪತ್ರ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಪ್ರವಾಹದಿಂದ ತೊಂದರೆಯಾದವರಿಗೆ ಧನ ಸಹಾಯದ ಚೆಕ್ ವಿತರಿಸಲಾಯಿತು.

ಇದಕ್ಕೂ ಮೊದಲು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಶಿವನೇಕಟ್ಟೆಯಲ್ಲಿ ಹಕ್ಕಿಪಿಕ್ಕಿ ಜನಾಂಗದವರಿಗೆ ಮತ್ತು ವಸತಿರಹಿತರಿಗೆ ಸೂರು ಕಲ್ಪಿಸಲು ಮಂಜೂರಾದ 13.26 ಎಕರೆ ಜಮೀನಿನ ಸ್ಥಳ ಪರಿಶಿಲನೆ ನಡೆಸಿ, ಆದಷ್ಟು ಬೇಗ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸುವಂತೆ ಸಚಿವರು ಸೂಚನೆ ನೀಡಿದರು.