- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪರಿಸರ ಸಂರಕ್ಷಣೆ ಹಾಗೂ ಕೋವಿಡ್ ಮುಂಜಾಗೃತೆಯೊಂದಿಗೆ ಗಣೇಶ ಹಬ್ಬ ಆಚರಿಸೋಣ

Eco Friendly [1]ಗಣೇಶ ಹಬ್ಬ ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಹಬ್ಬ) ದಿನ ಆಚರಿಸಲಾಗುತ್ತದೆ. ಈ ಹಬ್ಬದಂದು ಪ್ರಮುಖವಾಗಿ ಕಂಡು ಬರುವುದೆಂದರೆ ಪಟಾಕಿ, ಡಿಜೆ, ಡ್ಯಾನ್ಸ್ ಹೀಗೆ ಮೋಜು ಮಸ್ತಿಯಿಂದ ಬಹಳ ವಿಜೃಂಭಣೆಯಿಂದ ಆಚರಿಸುವುದು. ಅನ್ಯ ರಾಜ್ಯಗಳಿಂದ ಬೃಹತಾಕಾರದ ಗಣೇಶ ವಿಗ್ರಹ ತರುವುದು, ಮಣ್ಣಿನ ವಿಗ್ರಹಗಳ ಬಳಕೆಗಿಂತಲೂ ಪ್ಲಾಸ್ಟರ್ನಿಂದ ತಯಾರಿಸಿದ ಗಣಪತಿಗಳ ಮಾರಾಟ ಹೆಚ್ಚಳ ಇರುವುದರಿಂದ ಅವುಗಳ ಪ್ರತಿಷ್ಠಾಪನೆ ಮಾಡುವುದು. ವಿವಿಧ ರೀತಿಯ ಪಟಾಕಿಗಳನ್ನು ಬಳಸುವುದು ಇವೆಲ್ಲವುಗಳನ್ನು ಗಣೇಶ ಹಬ್ಬ ಆಚರಣೆಯಲ್ಲಿ ಕಾಣಬಹುದು.

ಇಷ್ಟೆಲ್ಲ ವಿಜೃಂಭಣೆಯಿಂದ ಆಚರಣೆ ಮಾಡುವ ನಾವು ಪರಿಸರದ ಸಂರಕ್ಷಣೆ ಬಗ್ಗೆ ಗಮನ ಹರಿಸುವುದು ತೀರಾ ಕಡಿಮೆ. ಪ್ಲಾಸ್ಟರ್ ಮತ್ತು ರಾಸಾಯನಿಕ ಬಣ್ಣಗಳ ಮಿಶ್ರಿತದಿಂದ ತಯಾರಿಸಿದ ವಿಗ್ರಹಗಳು ನೋಡಲು ಕಣ್ಣಿಗೆ ಸುಂದರವಾಗಿ ಕಂಡರೂ, ಜಲಮೂಲಗಳ ಮೇಲೆ ಭಾರಿ ಪ್ರಭಾವ ಬೀರುತ್ತವೆ. ಜಲಮೂಲಗಳಲ್ಲಿ ಕೆಮಿಕಲ್ ಮಿಶ್ರಿತ ಬಣ್ಣದ ವಿಗ್ರಹಗಳ ವಿಸರ್ಜನೆ ಮಾಡುವುದರಿಂದ ಜಲ ಮಾಲಿನ್ಯವಾಗುತ್ತದೆ. ನೀರಿನ ಮೇಲೆ ಅವಲಂಬಿತವಾದ ಪಶು, ಪಕ್ಷಿ, ಪ್ರಾಣಿಗಳು ಮತ್ತು ಇತರೆ ಜಲಚರಗಳು ದಿನನಿತ್ಯ ನೀರು ಸೇವನೆ ಮಾಡುವುದರಿಂದ ಅವುಗಳ ಜೀವಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಇಂತಹ ಕ್ರಿಯೆಗಳನ್ನು ತಡೆಯುವುದು ಅವಶ್ಯಕವಾಗಿದೆ.

ಅಭಿವೃದ್ಧಿ ಹೆಸರಿನಲ್ಲಿ ರಸ್ತೆ, ಅಪಾಟ್ಮೆರ್ಂಟ್ಗಳ ನಿರ್ಮಾಣ ಮಾಡಲು ಗಿಡಮರ ಹಾಗೂ ಕೆರೆಗಳ ನಾಶ ಮಾಡಲಾಗುತ್ತಿದೆ. ಇದರಿಂದ ಜಲಮೂಲಗಳು ನಾಶವಾಗುತ್ತಿದ್ದು, ಇದನ್ನೇ ನಂಬಿಕೊಂಡ ಪ್ರಾಣಿ, ಪಕ್ಷಿ, ಹಾಗೂ ಜಲಚರಗಳು ಬದುಕುಳಿಯಲು ಹೇಗೆ ಸಾಧ್ಯ? ಮೊದಲೇ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಕಾಣಸಿಗುತ್ತಿವೆ. ಇನ್ನು ಪ್ಲಾಸ್ಟರ್ ಹಾಗೂ ರಾಸಾಯನಿಕ ಬಣ್ಣದಿಂದ ಸಿದ್ಧಪಡಿಸಿದ ವಿಗ್ರಹಗಳ ವಿಸರ್ಜನೆ ಮಾಡಿದರೆ ಜಲಮೂಲಗಳ ಅಭಿವೃದ್ಧಿಯ ಬದಲು ನಶಿಸಿ ಹೋಗಿ, ಪ್ರಾಣಿ ಸಂಕುಲಗಳಿಗೆ ಹಾನಿಯುಂಟಾಗುತ್ತದೆ.

ಹಬ್ಬದ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದರೆ, ಸಂಪೂರ್ಣ ಮಣ್ಣಿನಿಂದ ಹಾಗೂ ಬಣ್ಣ ಲೇಪಿತವಲ್ಲದ ವಿಗ್ರಹಗಳನ್ನು ಮಾತ್ರ ಕೆರೆಗಳಲ್ಲಿ ವಿಸರ್ಜಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಕೃತಕ ಹೊಂಡಗಳ ನಿರ್ಮಾಣ ಮಾಡಿ ಅಲ್ಲಿಯೇ ಗಣಪತಿ ವಿಸರ್ಜನೆ ಮಾಡಬೇಕು. ಗಣೇಶ ಹಬ್ಬ ಎಂದರೆ ಯುವಕರಿಗೆ ಮೊದಲು ನೆನಪಾಗುವುದೆಂದರೆ ಪಟಾಕಿ ಹಚ್ಚಿ ಸಂಭ್ರಮ ಪಡುವುದು. ಪಟಾಕಿಗಳಲ್ಲಿಯು ರಾಸಾಯನಿಕ ಮದ್ದಿನ ಮಿಶ್ರಣ ಇರುತ್ತದೆ. ಇದರಿಂದ ಹೊರಹೊಮ್ಮುವ ಹೊಗೆಯಿಂದ ಪರಿಸರದಲ್ಲಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗಿ ಪರಿಸರದಲ್ಲಿ ವಾಸಿಸುವ ಜೀವಗಳಿಗೆ ತೊಂದರೆ ಉಂಟಾಗುತ್ತದೆ. ಇದರ ಬದಲು ಮಾರುಕಟ್ಟೆಯಲ್ಲಿ ದೊರೆಯುವ ಸಿಎಸ್ಐಆರ್ ಮತ್ತು ಎನ್ಇಇಆರ್ಐ ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಬಳಸಿ ಆಚರಣೆ ಮಾಡುವುದು ಸೂಕ್ತ. ಇದರಿಂದ ಪರಿಸರಕ್ಕೆ ಯಾವುದೇ ಶಬ್ದ ಹಾಗೂ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ.

ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ದೇಶವು ಸಾಕಷ್ಟು ನಷ್ಟ ಅನುಭವಿಸಿದೆ. ಲಾಕಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಜನರಿಗೆ ದುಡಿಯಲು ಕೆಲಸವಿಲ್ಲದೇ, ಊಟ ಸಿಗದೆ ಪರದಾಡಿದ್ದು, ಇನ್ನು ಕಣ್ಣು ಮುಂದೆಯೇ ಇದೆ. ಮೂರನೇ ಅಲೆ ಬರುವ ಸಂಭವವಿದೆ ಎಂದು ತಜ್ಞರು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಹೇಳಿಕೆ ನೀಡಿದ್ದು, ಆರೋಗ್ಯದ ದೃಷ್ಟಿಯಿಂದ ಹಬ್ಬಗಳಲ್ಲಿ ಹೆಚ್ಚು ಜನ ಬಾಗಿಯಾಗುವುದನ್ನು ತಪ್ಪಿಸಬೇಕು. ಮೂರನೇ ಅಲೆ ಬರದ ಹಾಗೆ ನಾವೆಲ್ಲರೂ ಎಚ್ಚರಿಕೆಯನ್ನು ವಹಿಸಬೇಕು. ಅದಕ್ಕಾಗಿ ಸರಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಗಳ ಪಾಲನೆ ಮಾಡಿ, ಮೊದಲ ಮತ್ತು ಎರಡನೇ ಹಂತದ ಕೋವಿಡ್ ಲಸಿಕೆ ತಪ್ಪದೆ ಪಡೆದುಕೊಳ್ಳಬೇಕು. ಹೀಗೆ ಪರಿಸರ ಸಂರಕ್ಷಣೆ ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ನಾವೆಲ್ಲರು ಅರ್ಥಪೂರ್ಣವಾಗಿ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಬೇಕಾಗಿದೆ.

ಲೇಖನ : ಗಂಗಾಧರ ಯಲಿವಾಳ, ಹುಬ್ಬಳ್ಳಿ.

Gangadhara Yeliwala [2]