- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದಲ್ಲಿ 5 ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಅನುಮತಿ

Ganapathy [1]ಬೆಂಗಳೂರು: ರಾಜ್ಯದಲ್ಲಿ 5 ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

ರಾಜ್ಯದಾದ್ಯಂತ ಐದು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ವಿಧಿಸುವ ಷರತ್ತುಗಳನ್ನು ಪಾಲಿಸಿಕೊಂಡು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಲು ತೀರ್ಮಾನಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ “ಗರಿಷ್ಠ 5 ದಿನಗಳ ವರೆಗೆ ಮಾತ್ರ ಅನುಮತಿ ನೀಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ವಾರ್ಡ್ ಗೆ ಒಂದು, ಹಳ್ಳಿಯಲ್ಲಿ ಸ್ಥಳೀಯ ಆಡಳಿತದ ತೀರ್ಮಾನದಂತೆ ಸಾರ್ವಜನಿಕ ಗಣೇಶೋತ್ಸವ ನಡೆಸಲು ಅನುಮತಿ ‌ನೀಡಲಾಗುವುದು” ಎಂದು ಹೇಳಿದರು.

“ಡಿಜೆ, ಧ್ವನಿವರ್ಧಕ ಬಳಕೆಗೆ ಅನುಮತಿ ‌ಇಲ್ಲ, ವಿಗ್ರಹ ಗಳ ವಿಸರ್ಜನೆಗೆ ಮೆರವಣಿಗೆ ನಡೆಸುವಂತಿಲ್ಲ. ಶಾಲೆ, ಕಾಲೇಜುಗಳಲ್ಲಿ ಆಚರಿಸುವಂತಿಲ್ಲ ಎಂದರು. ಗರಿಷ್ಠ ೫೦*೫೦ ಅಡಿ ಪೆಂಡಾಲ್ ನಲ್ಲಿ ೨೦ ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ. ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ಅಡ್ಡಯಾಗದಂತೆ ಆಚರಿಸಬೇಕು” ಎಂದು ಹೇಳಿದರು.

“ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಮತ್ತು ಆ ಪ್ರದೇಶದಲ್ಲಿ ಲಸಿಕೆ ನೀಡುವ ದನ್ನು ಹೆಚ್ಚಿಸಬೇಕು ಎನ್ನುವ ಷರತ್ತು ವಿದಿಸಿದ್ದೇವೆ.
ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಮಾಣ ಶೇ ೨ ಕ್ಕಿಂತ ಕಡಿಮೆ ಇದ್ದರೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಆಯಾ ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದ್ದೇವೆ.
ಸಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಜ್ಞರು ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮತಿ ಸಲಹೆ ನೀಡಿದೆ” ಎಂದು ಆರ್ ಅಶೋಕ್ ಹೇಳಿದರು.