- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರಗರು ತಮ್ಮ ಕೀಳರಿಮೆ ಬಿಟ್ಟು ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು : ಸಚಿವ ಎಸ್.ಅಂಗಾರ

Angara [1]ಪುತ್ತೂರು  : ಸರಕಾರದ ಸೌಲ್ಯಭ್ಯಗಳಿಂದ ಇಂದಿಗೂ ವಂಚಿತರಾಗಿರುವ ಕೊರಗ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದ್ದು, ಈ ಕುರಿತು ಆಯಾಯ ತಾಲೂಕುಗಳಲ್ಲೇ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಬಂದರು, ಮೀನುಗಾರಿಕೆ, ಒಳನಾಡು ಮತ್ತು ಜಲಸಾರಿಗೆ ಸಚಿವ ಎಸ್.ಅಂಗಾರ ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ನಡೆದ ಕೊರಗ ಸಮುದಾಯದ ಮುಖಂಡರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಈ ಮಾಹಿತಿ ನೀಡಿದರು. ಕೊರಗ ಸಮುದಾಯಗಳು ಜಮೀನು ಹಕ್ಕು ಪತ್ರ, ಪೌಷ್ಠಿಕ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಇನ್ನೂ ವಂಚಿತರಾಗಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಸೌಲಭ್ಯಗಳು ಕೊರಗರಿಗೆ ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿಯೇ ಗುರುತಿಸಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂಬಂಧ ಕೊರಗ ಸಮುದಾಯಕ್ಕೆ ಕೇವಲ ಭರವಸೆ ನೀಡುವುದು ಮುಖ್ಯವಲ್ಲ, ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ನಾನೂ ಓರ್ವ ಕೂಲಿ ಕಾರ್ಮಿಕನಾಗಿ ಬಡತನದ ಅರಿವು, ಅನುಭವ, ಬಡವರ ಕಷ್ಟವನ್ನು ಚೆನ್ನಾಗಿ ಬಲ್ಲವನಾಗಿದ್ದೇನೆ. ಕೊರಗ ಸಮುದಾಯ ಮುಖಂಡರು ಪ್ರಸ್ತಾಪಿಸಿದ ಎಲ್ಲಾ ಅಂಶಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಈ ಬಗ್ಗೆ ರಾಜ್ಯ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚಿಸಿ ಕೊರಗರ ಜಮೀನು ಹಕ್ಕು ಪತ್ರ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

Angara [2]ಕೊರಗರು ತಮ್ಮ ಕೀಳರಿಮೆ ಬಿಟ್ಟು ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದರೊಂದಿಗೆ ಅವರ ಬದುಕನ್ನು ಹಸನುಗೊಳಿಸಬೇಕು. ನನಗೆ ಒಳ್ಳೆಯದಾಗಬೇಕು ಎಂಬ ಮನಸ್ಸು ಎಲ್ಲರಲ್ಲಿ ಮೂಡಿ ಬಂದಲ್ಲಿ ನಾವೂ ಎಲ್ಲರಂತೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದು ಹೇಳಿದರು.

ಕೊರಗ ಸಮುದಾಯ ಕರಾವಳಿ ಜಿಲ್ಲೆಯ ಮೂಲನಿವಾಸಿಗಳು ಎನ್ನುವ ರೀತಿಯಲ್ಲಿ ಗುರುತಿಸಿಕೊಂಡಿದ್ದರೂ, ಈ ಸಮುದಾಯಕ್ಕೆ ಇಂದಿಗೂ ತಮ್ಮ ಮೂಲ ಸ್ಥಳದ ಹಕ್ಕುಪತ್ರವಾಗಲೀ , ಸ್ವಂತ ಮನೆಯೂ ಇಲ್ಲದಂತಹ ಸ್ಥಿತಿಯಿದೆ. ಪರಿಶಿಷ್ಟ ಜಾತಿಯಡಿ ಬರುವಂತಹ ಈ ಕೊರಗ ಸಮುದಾಯ ಇತರ ಪರಿಶಿಷ್ಟ ಸಮುದಾಯದಿಂದ ಕೊಂಚ ವಿಭಿನ್ನವಾಗಿ ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದು, ತಮ್ಮ ಕುಟುಂಬಗಳ ನಡುವೆಯೇ ವಿವಾಹ ಸಂಬಂಧಗಳನ್ನು ಮಾಡಿಕೊಂಡು ಬರುತ್ತಿದೆ.

ಅಲ್ಲದೆ ವರ್ಷದಿಂದ ವರ್ಷಕ್ಕೆ ಈ ಜನಾಂಗದ ಜನಸಂಖ್ಯೆಯೂ ಕಡಿಮೆಯಾಗುತ್ತಾ ಬರುತ್ತಿದ್ದು, ಇಂದಿಗೂ ಈ ಸಮಾಜ ಹಲವು ಮೂಡನಂಭಿಕೆಗಳೊಂದಿಗೆ ಜೀವನ ಸಾಗಿಸುತ್ತಿದೆ. ಕೊರಗರ ಅಭಿವೃದ್ಧಿಗಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಸಂಘ-ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದರೂ, ಈ ಜನಾಂಗ ಸರಕಾರದಿಂದ ಸೇರಬೇಕಾಗಿದ್ದ ಸೌಲಭ್ಯಗಳಿಂದ ವಂಚಿತವಾಗಿದೆ.

ಈ ಸಂವಾದ ಕಾರ್ಯಕ್ರಮದ ಮೂಲಕ ಕೊರಗ ಜನಾಂಗವನ್ನು ಮುಖ್ಯವಾಹಿನಿಗೆ ತರುವ ಕುರಿತು ಯೋಜನೆ ರೂಪಿಸಲಾಗಿದೆ ಹಾಗೂ ಎಲ್ಲರ ಸಲಹೆಯ ಮೇರೆಗೆ ಕೆಲಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಇದೇ ವೇಳೆ ನುಡಿದರು.

Angara [3]