- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ನಿಧನ

Oscar fernandise [1]ಮಂಗಳೂರು : ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.13 ರಂದು ನಿಧನರಾಗಿದ್ದಾರೆ.

ಮನೆಯಲ್ಲಿ ಯೋಗ ಮಾಡುತ್ತಿರುವಾಗ ಕುಸಿದು ಬಿದ್ದು  ತಲೆಯ ಒಳಗೆ ರಕ್ತಸ್ರಾವವಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆಯಲು ವೈದ್ಯರು ಸರ್ಜರಿ ಮಾಡಿದ್ದರು. ಆ ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಮಾ.27, 1941 ರಲ್ಲಿ ಜನಿಸಿದ್ದ ಆಸ್ಕರ್ ಫರ್ನಾಂಡಿಸ್, ಐಎನ್ ಸಿಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಅನುಭವವುಳ್ಳ ನಾಯಕರಾಗಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದಷ್ಟೇ ಅಲ್ಲದೇ ರಾಹುಲ್ ಗಾಂಧಿ ಅವರಿಗೂ ಆಸ್ಕರ್ ಆಪ್ತರಾಗಿದ್ದರು.

ಡಾ.ಮನಮೋಹನ್ ಸಿಂಗ್ ಅವರ ಯುಪಿಎ ಮೊದಲ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿದ್ದ ಆಸ್ಕರ್ ಫರ್ನಾಂಡಿಸ್ ಯುಪಿಎ-2 ನಲ್ಲಿ ಸಾರಿಗೆ, ರಸ್ತೆ ಹಾಗೂ ಹೆದ್ದಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

1980 ರಲ್ಲಿ 7 ನೇ ಲೋಕಸಭೆಗೆ ಉಡುಪಿ ಕ್ಷೇತ್ರದಿಂದ ಮೊದಲಬಾರಿ ಸಂಸತ್ ಗೆ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ 1984, 1989, 1991, 1996 ರಲ್ಲಿ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1998 ರಲ್ಲಿ ರಾಜ್ಯಸಭೆಗೆ ಮೊದಲ ಬಾರಿ ಆಯ್ಕೆಯಾದ ಅವರು, 2004 ರಲ್ಲಿ ಮರು ಆಯ್ಕೆಯಾದರು. 2004-2009 ರಲ್ಲಿ ಕೇಂದ್ರ ಸಚಿವರಾಗಿ ಸಾಂಖ್ಯಿಕ ಹಾಗೂ ಯೋಜನಾ ಜಾರಿ ಸಚಿವಾಲಯ, ಎನ್ಆರ್ ಐ ವ್ಯವಹಾರಗಳ ಖಾತೆ, ಯುವಜನ ಕ್ರೀಡಾ ಖಾತೆ, ಕಾರ್ಮಿಕ ಹಾಗೂ ಉದ್ಯೋಗ ಖಾತೆಗಳಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಬೆಂಗಳೂರಿನ ಐಐಎಸ್ ಸಿ ಕೌನ್ಸಿಲ್ ನ ಸದಸ್ಯರಾಗಿಯೂ ಆಸ್ಕರ್ ಫರ್ನಾಂಡಿಸ್ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ.