- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಾಸಕ ಪತ್ರಿಕೆಯ ಸಂಪಾದಕನ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಬದುಕುಳಿದ ಮೂರು ವರ್ಷದ ಹೆಣ್ಣು ಮಗು

shankar [1]ಬೆಂಗಳೂರು: ಶಾಸಕ ಪತ್ರಿಕೆಯ ಸಂಪಾದಕ ಹಲ್ಲೆಗೆರೆ ಶಂಕರ್ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತರನ್ನು ಶಂಕರ್ ಪತ್ನಿ ಭಾರತಿ(50), ಮಗಳು ಸಿಂಚನ(33), 2ನೇ ಮಗಳು ಸಿಂಧುರಾಣಿ (30), ಮಗ ಮಧುಸಾಗರ್(27), ಹಾಗೂ 9 ತಿಂಗಳ ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಿಂಚನ ಮಗಳು ಬದುಕುಳಿದಿದ್ದಾಳೆ.

ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಪ್ರತಿದಿನ ಗಲಾಟೆ ಆಗುತ್ತಿತ್ತು. ಹೀಗೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಶಂಕರ್ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟಿದ್ದರು. ಇದರಿಂದ ಮನನೊಂದ ಶಂಕರ್ ಪತ್ನಿ, ಪುತ್ರ, ಇಬ್ಬರು ಹೆಣ್ಣುಮಕ್ಕಳು ಪತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಸಿಂಧೂರಾಣಿಯ 9 ತಿಂಗಳ ಹಸುಗೂಸನ್ನು ಕೊಂದಿದ್ದಾರೆ.

ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅದರಲ್ಲಿ 3 ವರ್ಷದ ಹೆಣ್ಣು ಮಗು ಅದೃಷ್ಟವಶಾತ್ ಪಾರಾಗಿದೆ. ಈ ಮಗು ಮೂರು ದಿನಗಳ ಕಾಲ ಹೆಣಗಳ ನಡುವೆ ಇತ್ತು. ಅನ್ನ ನೀರು ಇಲ್ಲದೇ ಸಾವಿನ ಮನೆಯಲ್ಲೇ ಮಗು ಇತ್ತು. ಸದ್ಯ ಆತ್ಮಹತ್ಯೆ ಸ್ಥಳದಲ್ಲಿಂದ ಮಗುವಿನ ರಕ್ಷಣೆ ಮಾಡಲಾಗಿದ್ದು, ಅಲ್ಲೇ ಸಮೀಪದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯಲ್ಲಿರುವವರು ಕಳೆದ ಮೂರು ನಾಲ್ಕು ದಿನಗಳಿಂದ ಫೋನ್ ರೀಸಿವ್ ಮಾಡತ್ತಿಲ್ಲ ಎಂದು ಇಂದು ಸಾಯಂಕಾಲ ಪೋಲೀಸ್ ಠಾಣೆಗೆ ಸ್ಥಳೀಯರಿಂದ ಕರೆ ಬಂದಿದೆ ಎಂದು ಡಿಸಿಪಿ ಸಂಜೀವ್ ಎಂ ಪಾಟೀಲ್ ಹೇಳಿದ್ದಾರೆ. ಬಂದು ಕಿಟಕಿ ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಐದು ಮೃತ ದೇಹ ಪತ್ತೆಯಾಗಿದೆ, ಅದರಲ್ಲಿ ಒಂದು ಮಗು ಇನ್ನೂ ನಾಲ್ಕು ವಯಸ್ಕರ ಮೃತ ದೇಹ ಪತ್ತೆಯಾಗಿದೆ. ಒಂದು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳದಲ್ಲಿ ಶೋಧ ನಡೆಯುತ್ತಿದೆ. ಇನ್ನೂ ಘಟನೆ ಯಾವ ಕಾರಣಕ್ಕೆ ಆಗಿದೆ  ಎಂದು  ತನಿಖೆ ನಡೆಸುತ್ತಿದ್ದೇವೆ ಎಂದರು.