- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದೇವಸ್ಥಾನಗಳ ನಿರ್ಬಂಧ ತೆರವು : ನೆಗೆಟಿವ್ ವರದಿ ಹೊಂದಿದ್ದಲ್ಲಿ ಸೇವೆಗೆ ಅವಕಾಶ

Kateel Kukke Dharmasthala [1]ಮಂಗಳೂರು :  ಕೋವಿಡ್ ಸೋಂಕಿನ ಪಾಸಿಟಿವಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧ ಗಳನ್ನು ಹಿಂಪಡೆದು ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಹಾಗೂ ಸೇವೆಗಳನ್ನು ನಡೆಸಲು ಷರತ್ತುಗಳನ್ನು ಪಾಲಿಸುವ ನಿಬಂಧನೆಗಳಿಗೊಳಪಟ್ಟು ಜಿಲ್ಲಾಡಳಿತ ಅನುಮತಿ ನೀಡಿದೆ.

ಷರತ್ತುಗಳಿಂತಿವೆ:
1, ದೇವಾಲಯಗಳಲ್ಲಿ ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ದೇವಳದ ಆಡಳಿತ ವರ್ಗವು ಇದನ್ನು ಕಟ್ಟುನಿಟಟಾಗಿ ಅನುಷ್ಠಾನಿಸುವ  ಜವಾಬ್ದಾರಿಯನ್ನು ಹೊಂದಿದೆ.
2. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ ಮಂಡಳಿ, ಅರ್ಚಕರು, ಸಿಬ್ಬಂದಿಗಳು ಸೇರಿದಂತೆ ಎಲ್ಲಾ ವರ್ಗದವರು ಪ್ರತಿ 15 ದಿನಗಳಿಗೊಮ್ಮೆ RT-PCR ಟೆಸ್ಟ್ ಮಾಡಿಸಿ ನೆಗೆಟಿವ್ ವರದಿಯನ್ನು ಹೊಂದಿರತಕ್ಕದ್ದು.
3. ದೇವಾಲಯಗಳಿಗೆ ಸೇವೆಗೆ ಬರುವ ಭಕ್ತರು 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ ಸಹ ಕಡ್ಡಾಯವಾಗಿ 72 ಗಂಟೆಗಳಿಗಿಂತ ಮುಂಚಿತವಾಗಿ RT-PCR ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಸೇವೆಗೆ ಅವಕಾಶ ನೀಡಬೇಕು.
4. ದೇವಾಲಯಗಳಿಗೆ ಬರುವ ಭಕ್ತರಿಗೆ ಕೋವಿಡ್ ಲಸಿಕೆಯನ್ನು ಪಡೆಯುವ ಬಗ್ಗೆ ಸಲಹೆಗಳನ್ನು ನೀಡುವ ಕುರಿತು ಹಾಗೂ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು.
5. ದೇವಾಲಯಕ್ಕೆ ಬರುವ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯದಿದ್ದಲ್ಲಿ, ಅಂತಹವರುಗಳಿಗೆ ಲಸಿಕೆ ನೀಡಲು ಅನುಕೂಲವಾಗುವಂತೆ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ದೇವಾಲಯಗಳಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ತೆರೆಯಲು ಹಾಗೂ ಜನಸಂದಣಿಯಾಗದಂತ ಲಸಿಕೆ ನೀಡಲು ಕ್ರಮವಹಿಸುವುದು.
6. ಮೇಲ್ಕಂಡ ದೇವಾಲಯಗಳಲ್ಲಿ ನಡೆಯುವಂತಹ ಪ್ರಮುಖ ಸೇವೆಗಳನ್ನು (ಅಂದರೆ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ  ಸೇವೆಗಳು ಇತ್ಯಾದಿ) ಆದಷ್ಟು ಮಿತಿಗೊಳಿಸುವುದು ಹಾಗೂ ಜನಸಂದಣಿಯಾಗದಂತೆ ದಿನವೊಂದಕ್ಕೆ ದೇವಳದ ಸ್ಥಳ ಸಾಮರ್ಥ್ಯ ವನ್ನು ಹೊಂದಿಕೊಂಡು ಕನಿಷ್ಟ ಸಂಖ್ಯೆಯಲ್ಲಿ ಸೇವೆಗಳನ್ನು ನಡೆಸಲು ವ್ಯವಸ್ಥೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.