- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನಿಂದ ಮಂಗಳೂರು ಟು ದುಬೈ ವಿಮಾನಯಾನ ಆರಂಭ

Jet Airways Mangalore to Duba [1]ಮಂಗಳೂರು : ಗುರುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಜೆಟ್‌ ಏರ್‌ವೇಸ್‌ನಿಂದ ದುಬೈಗೆ ವಿಮಾನಯಾನ ಆರಂಭಗೊಂಡಿತು. ಈ ಸಂದರ್ಭ ನಡೆದ ಸಮಾರಂಭದಲ್ಲಿ ಜೆಟ್‌ ಏರ್‌ವೇಸ್‌ನ ಹಿರಿಯ ಉಪಾಧ್ಯಕ್ಷ ಗೌರಂಗ್‌ ಶೆಟ್ಟಿ ಜೆಟ್‌ಏರ್‌ವೇಸ್‌ ದುಬೈ ಮತ್ತು ಕರ್ನಾಟಕದ ಬಂದರು ನಗರ ಮಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಸಂತಸಪಡುತ್ತಿದೆ. ಇವು ವಿಶ್ವದ ಅತ್ಯುತ್ತಮ ಉದ್ಯಮ ಪೂರಕ ಕೇಂದ್ರಗಳಾಗಿದ್ದು, ಸಂಸ್ಥೆ ಆರಂಭಿಸುತ್ತಿರುವ ವಿಮಾನಯಾನಕ್ಕೆ ಪ್ರಯಾಣಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ – ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಕರ್ನಾಟಕದಲ್ಲಿ ಪ್ರೊಟೆಕ್ಟರ್‌ ಆಫ್ ಎಮಿಗ್ರೆಂಟ್‌ ಕಚೇರಿ (ಪಿಇಒ) ಆರಂಭಿಸಲು ಪ್ರಯತ್ನಗಳು ನಡೆಯುತ್ತಿದ್ದು ಈಗಾಗಲೇ ಆರ್ಥಿಕ ಸಚಿವಾಲಯದ ಮುಂದೆ ಪ್ರಸ್ತಾವನೆ ಮಂಡಿಸಲಾಗಿದೆ. ಇದರ ಸ್ಥಾಪನೆಯಿಂದ ವಿದೇಶಗಳಿಗೆ ಉದ್ಯೋಗಕ್ಕೆ ತೆರಳುವ ಕಾರ್ಮಿಕ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ, ಈಗಾಗಲೇ ಮುಂಬಯಿ, ಚೆನ್ನೈ ಅಥವಾ ತಿರುವನಂತಪುರದಲ್ಲಿ ಮಾತ್ರ ಪಿಇಒ ಇದ್ದು, ಇದರಿಂದ ಬಹಳಷ್ಟು ಮಂದಿ ಸಂಕಷ್ಟವನ್ನು ಅನುಭವಿಸುವಂತಾಗಿದೆ ಎಂದರು. ಮಂಗಳೂರಿನಿಂದ ದುಬೈ ಗೆ ವಿಮಾನಯಾನ ಆರಂಭಿಸಿರುವುದಕ್ಕೆ ಜೆಟ್‌ ಏರ್‌ವೇಸ್‌ ಸಂಸ್ಥೆಯನ್ನು ಅಭಿನಂದಿಸಿದ ಅವರು ಬಹುಕಾಲದ ಬೇಡಿಕೆಯೊಂದು ಇಂದು ಸಾಕಾರಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ ರಾವ್, ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ರಾಧಾಕೃಷ್ಣ, ಕಾರ್ಪೋರೇಷನ್ ಬ್ಯಾಂಕಿನ ನಿರ್ದೇಶಕ ಅಜಿತ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.