ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ- ಡಿವೈಎಫ್ಐ

8:09 PM, Wednesday, September 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Moral policing ಮಂಗಳೂರು :  ಸುರತ್ಕಲ್ ಎನ್.ಐ.ಟಿ.ಕೆ ಸಮೀಪ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ದಾಂಧಲೆ ನಡೆಸಿ ಹಲ್ಲೆಗೆ ಯತ್ನಿಸಿದ ಬಿಜೆಪಿಯ ಗೂಂಡಾ ಕಾರ್ಯಕರ್ತರ ಕೃತ್ಯವನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸಿದೆ. ಪೊಲೀಸ್ ಇಲಾಖೆ ಈ ಕೂಡಲೇ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನಿನಡಿ ಶಿಕ್ಷೆಗೊಳಪಡಿಸಿ ಬಂಧಿಸಲು ಒತ್ತಾಯಿಸುತ್ತದೆ.

ದೇರಳಕಟ್ಟೆ ಕೆ.ಎಸ್‌ ಹೆಗ್ಡೆ ಮೆಡಿಕಲ್‌ ಕಾಲೇಜಿನಲ್ಲಿ ವ್ಯಾಸಂಗ ನಡೆಸುವ ವೈದ್ಯಕೀಯ ವಿದ್ಯಾರ್ಥಿಗಳು ಮಣಿಪಾಲಕ್ಕೆ ತೆರಳಿ ಬರುವಂತಹ ಹೊತ್ತಿನಲ್ಲಿ ಸುರತ್ಕಲ್ ಬಳಿ ತಡೆದು ಹಲ್ಲೆ ನಡೆಸಿದ ಬಿಜೆಪಿ, ಬಜರಂಗದಳದ ಕಾರ್ಯಕರ್ತರನ್ನು ಪೊಲೀಸ್ ಇಲಾಖೆ ಕಠಿಣ ಕಾನೂನಿನಡಿ ಬಂಧಿಸಿ ಶಿಕ್ಷೆಗೊಳಪಡಿಸುವ ಬದಲು ಕೇವಲ ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವ ಕ್ರಮವನ್ನು ಜಿಲ್ಲೆಯ ಪ್ರಜ್ಞಾವಂತ ಜನ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ಎತ್ತಿ ತೋರಿಸಿದೆ. ಜಿಲ್ಲೆಯಲ್ಲಿ ಆಗಾಗ ನಡೆಯುವಂತಹ ಇಂತಹ ಘಟನೆಗಳನ್ನು ತಡೆಗಟ್ಟಿ ಮತೀಯ ಶಕ್ತಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸ್ ಇಲಾಖೆ ದಯನೀಯ ವೈಫಲ್ಯವನ್ನು ಕಂಡಿದೆ. ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿಗಳು, ಅಕ್ರಮ ಚಟುವಟಿಕೆಗಳು, ಅಕ್ರಮ ಮರಳುಗಾರಿಕೆ, ಇತರೆ ಮಾಫೀಯಾಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಮತೀಯ ಶಕ್ತಿಗಳ ಅಟ್ಟಹಾಸವನ್ನು ಕಡಿವಾಣ ಮಾಡಲಾಗದಷ್ಟು ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನೇರ ಹೊಣೆ. ನಿರುದ್ಯೋಗಿ ಯುವಕರನ್ನು ಇಂತಹ ಕ್ರಿಮಿನಲ್, ಅನೈತಿಕ ಕೃತ್ಯಗಳಿಗೆ ಬಳಸಿಕೊಂಡು ಬಿಜೆಪಿ ಪರಿವಾರ ಆಡುವ ಆಟಗಳಿಗೆ ಇನ್ನಾದರು ಕಡಿವಾಣ ಬೀಳಬೇಕು. ಇಲ್ಲದಿದ್ದಲ್ಲಿ ದಕ್ಷಿಣ ಕ‌ನ್ನಡ ಜಿಲ್ಲೆ ಅಭಿವೃದ್ದಿಯಲ್ಲಿ ಮತ್ತುಷ್ಟು ಹಿನ್ನಡೆ ಸಾಧಿಸುತ್ತದೆ.

ಪೊಲೀಸ್ ಇಲಾಖೆ ಈ ಕೂಡಲೇ ಅನೈತಿಕ ಗೂಂಡಾಗಿರಿ ನಡೆಸಿದ ತಪ್ಪಿತಸ್ಥರನ್ನು ಕಠಿಣ ಸೆಕ್ಷನ್ ಗಳಡಿ ಮರು ಬಂಧಿಸಿ ಜೈಲಿಗಟ್ಟಿ ಶಿಕ್ಷೆಗೊಳಪಡಿಸಲು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English