- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗೊಂದಲ ಬೇಡ, ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ : ಆರ್ ಅಶೋಕ್

R  Ashoka [1]ಬೆಂಗಳೂರು  : ಯಾರಿಗೂ ಯಾವುದೇ ಗೊಂದಲ ಬೇಡ, ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ೧ ಲಕ್ಷ ರೂಪಾಯಿ ನೀಡುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಿಧಾನಸೌಧದಲ್ಲಿ ಹೇಳಿದರು.

“ರಾಜ್ಯ ಸರ್ಕಾರ ಜನರ ಪರವಾಗಿ ಇದೆ. ನಮ್ಮದು ಜನಸ್ನೇಹಿ ಸರ್ಕಾರ. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರಿಗೆ 1 ಲಕ್ಷ ರೂ ವಿಪತ್ತು ಪರಿಹಾರ ನಿಧಿಯಿಂದ ನೀಡುತ್ತೇವೆ. ಕೇಂದ್ರ ಸರ್ಕಾರ ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ 50,000 ರೂ‌ ನೀಡುತ್ತದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಒಟ್ಟು 1.5 ಲಕ್ಷ ರೂ‌ ಸಿಗುತ್ತದೆ” ಎಂದು ಹೇಳಿದರು.
ಮಾರ್ಗಸೂಚಿ ಬಿಡುಗಡೆ ಮಾಡಿ ಮಾತನಾಡಿದ ಸಚಿವರು “ಎಲ್ಲ ತಾಲ್ಲೂಕು ಕಚೇರಿ, ನಾಡ ಕಚೇರಿ, ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಎಲ್ಲೇ ಮೃತಪಟ್ಟಿದ್ದರೂ ವಾಸಸ್ಥಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ಮರಣ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ನಾಗಿರಬೇಕು(18 ವರ್ಷ ತುಂಬಿರಬೇಕು).” ಎಂದರು.

ಸಲ್ಲಿಸಬೇಕಾದ ದಾಖಲಾತಿಯ ಕುರಿತಾಗಿ ಮಾತನಾಡಿದ ಆರ್ ಅಶೋಕ್ “ಕೋವಿಡ್ ರೋಗಿಯ P- ನಂಬರ್, ಮರಣ ಪ್ರಮಾಣ ಪತ್ರ, ಮೃತ ವ್ಯಕ್ತಿಯ ಆಧಾರ್ ಪ್ರತಿ, ಬಿಪಿಎಲ್ ಕಾರ್ಡ, ಅರ್ಜಿದಾರರ ಬ್ಯಾಂಕ್/ಅಂಚೆ ಖಾತೆ, ಸಲ್ಲಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆಯ ಅನುದಾನದಿಂದ ನೇರವಾಗಿ ಖಾತೆಗೆ ವರ್ಗಾವಣೆ ಮಾಡುತ್ತದೆ” ಎಂದು ಹೇಳಿದರು.

” ಅರ್ಜಿ ಸಲ್ಲಿಸಿದ ನಂತರ ಗ್ರಾಮ ಲೆಕ್ಕಾಧಿಕಾರಿಗಳು 7 ದಿನಗಳ ಒಳಗಾಗಿ ಭೌತಿಕ ಪರಿಶೀಲನೆ ನಡೆಸಿ ತಹಶಿಲ್ದಾರರಿಗೆ ವರದಿ ನೀಡಬೇಕು. ಕುಂದು ಕೊರತೆ ನಿವಾರಣೆಗೆ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ” ಎಂದರು.

ಯಾದಗಿರಿ ಮತಾಂತರ ಪ್ರಕರಣದ ಬಗ್ಗೆ ಮಾತನಾಡಿದ ಆರ್ ಅಶೋಕ್ “ಇದೊಂದು ಪಿಡುಗು, ದೇಶದ್ರೋಹದ ಕೆಲಸ.ಮತಾಂತರ ನಿಷೇಧ ಕಾಯಿದೆ ತರುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ಶಾಸಕರ ತಾಯಿಯನ್ನೇ ಮತಾಂತರ ಮಾಡುತ್ತಾರೆ ಅಂದರೆ ಇದರ ಗಂಭೀರತೆ ಅರಿಯಬೇಕು.ವಿದೇಶಿ ಹಣದಿಂದ ಇದೆಲ್ಲ ನಡೆಯುತ್ತಿದೆ.ಇದಕ್ಕೆ ಸೂಕ್ತ ಕಾನೂನು ತರುವ ಬಗ್ಗೆ ಚರ್ಚಿಸುತ್ತೇನೆ. ಬಿಜೆಪಿ, ಆರ್ ಎಸ್ ಎಸ್ ಇಲ್ಲದಿದ್ದರೆ ದೇಶದಲ್ಲಿ ಈ ಪಿಡುಗು ಇನ್ನು ಹೆಚ್ಚಾಗುತ್ತಿತ್ತು. ಇದನ್ನು ನಮ್ಮ ಸರ್ಕಾರ ಮಟ್ಟ ಹಾಕುತ್ತದೆ” ಎಂದು ಹೇಳಿದರು.