- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಂದಿನಿ‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಿ : ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ

Nandini [1]ಬೆಂಗಳೂರು: ಹಾಲು ಮತ್ತು ಸಕ್ಕರೆಯ ಉಪ ಉತ್ಪನ್ನಗಳು ಬಹಳಷ್ಟಿವೆ. ಕೆಎಂಎಫ್‌ನ ಉತ್ಪನ್ನಗಳು ಕೂಡ ಉತ್ತಮವಾಗಿವೆ. ಹೀಗಾಗಿ ತನ್ನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುವಂತೆ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಕರ್ನಾಟಕ ಹಾಲು ಮಹಾಮಂಡಲದ ನೂತನ ಯೋಜನೆಗಳಿಗೆ ಚಾಲನೆ ನೀಡಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಹಾಲಿನ‌ ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ವಿಸ್ತರಣೆ ಮಾಡಬೇಕು. ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ದೊರೆತರೆ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಮುಂದಿನ ಮೇ – ಜೂನ್ ಮಾಹೆಯೊಳಗೆ ೧೦೦ ಲಕ್ಷ ಲೀ. ಹಾಲು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಿ, ಅದಕ್ಕೆ ಬೇಕಾದ ಮಾರುಕಟ್ಟೆಯೂ ನಿಮಗೆ ದೊರೆಯುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು

ಆರ್ಥಿಕವಾಗಿ ನಮ್ಮ ರಾಜ್ಯ ಮುಂದೆ ಬರಬೇಕಾದರೆ ದುಡಿಮೆಯಿಂದ ಮಾತ್ರ ಸಾಧ್ಯ ಎಂದರಲ್ಲದೆ ಪಿರಮಿಡ್‌ನ ತಳಹಂತದಲ್ಲಿರುವ ದುಡಿಯುವ ವರ್ಗದವರು ಅಂದರೆ ರೈತರು, ಕೂಲಿಕಾರ್ಮಿಕರು ನಮ್ಮ ದೇಶದ ಆರ್ಥಿಕ ಪಗ್ರತಿಗೆ ಕಾರಣೀಭೂತರು ಎಂದರು.

ಸಹಕಾರಿ ರಂಗ ಶಕ್ತಿಯುತ ಕ್ಷೇತ್ರ:

ಸಹಕಾರಿ ರಂಗ ಬಹಳ ಶಕ್ತಿಯುತವಾದ ಕ್ಷೇತ್ರ. ಆದರೆ, ಪೂರ್ಣಪ್ರಮಾಣದಲ್ಲಿ ಉತ್ತಮ ರೀತಿ ಸದುಪಯೋಗ ಆಗಬೇಕಾಗಿದೆ. ಮಹರಾಷ್ಟ್ರ ಮತ್ತು ಗುಜರಾತಿನಲ್ಲಿ ಸಹಕಾರಿ ರಂಗ ಶಕ್ತಿ ಶಾಲಿ ಆಗಬೇಕು ಎಂದು ಅವರು ಹೇಳಿದರು.

‘ಸರ್ವ ಜನರಿಗೂ ಸಮಪಾಲು’ ಎನ್ನುವ ಸಹಕಾರಿ ರಂಗದ ಮೂಲ ಉದ್ದೇಶಕ್ಕೆ ಯಾವ ಕಾರಣದಿಂದಲೂ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಂಡಾಗ ಮಾತ್ರ ಸಹಕಾರಿ ರಂಗಕ್ಕೆ ಅರ್ಥ ಬರುತ್ತದೆ ಎಂದರು.

ಕೃಷಿ ಬೆಳೆದಿದೆ, ಹಸಿರು ಕ್ರಾಂತಿಯಾಗಿದೆ. ೧೩೦ ಕೋಟಿ ಜನಸಂಖ್ಯೆಗೆ ಆಹಾರ ಒದಗಿಸಿಕೊಳ್ಳುವ ಸ್ವಾವಲಂಬಿ ದೇಶ ಭಾರತ. ಆದರೆ ಹಸಿರು ಕ್ರಾಂತಿಗೆ ಕಾರಣನಾದ ಅನ್ನದಾತ ಬೆಳೆದಿಲ್ಲ. ಎಲ್ಲಿದ್ದಾನೋ ಅಲ್ಲೇ ಇದ್ದಾನೆ. ಕೃಷಿಕನ ಮೇಲೆ ನಮ್ಮ ಲಕ್ಷ್ಯ ಇರಬೇಕಿದೆ ಎಂದು ಸಿಎಂ ಹೇಳಿದರು.

ಸಹಕಾರಿ ರಂಗದ ಶಕ್ತಿಯನ್ನು ಕರ್ನಾಟಕ ಹಾಲು ಉತ್ಪಾದಕರ ಸಂಘಗಳಲ್ಲಿ ಕಾಣಬೇಕು. ನಮ್ಮ ಪ್ರಧಾನಿಗಳು ರೈತರ ಆದಾಯ ದ್ವಿಗುಣಗೊಳಿಸಲು ಉದ್ದೇಶಿಸಿದ್ದಾರೆ. ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಸಮಗ್ರ ಕೃಷಿ, ಕೃಷಿಕನ ಭೂಮಿ ಕೇವಲ ಬೆಳೆ ಬೆಳೆಯಲು ಮಾತ್ರವಲ್ಲ ಇತರ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ ಎಂದರು.

ಗೋ ಶಾಲೆ ನಿರ್ಮಾಣ :
ಹಾಲು ನಿರಂತರವಾಗಿ ಅವಶ್ಯಕತೆ ಇರುವಂತಹ ವಸ್ತು. ಹಾಲು ಕೊಡುವ ಗೋವಿನ ರಕ್ಷಣೆ ಕೂಡ ಅತ್ಯವಶ್ಯಕ. ಗೋವುಗಳು ಹಾಲು ಕೊಡುವುದನ್ನು ನಿಲ್ಲಿಸಿದಾಗಲೂ ಅದರ ರಕ್ಷಣೆ ನಮ್ಮ ನೈತಿಕ ಜವಾಬ್ದಾರಿ. ಗೋವನ್ನು ಕಸಾಯಿಖಾನೆಗೆ ನೀಡಲು ನಿಷೇದ ಹೇರಿ ಕಾನೂನು ರಚಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಿಸಲು ಬೇಕಾದ ಅನುದಾನ ನೀಡಲಾಗುವುದು. ಸರ್ಕಾರ ಗೋಶಾಲೆ ನಿರ್ಮಾಣ ಮಾಡುತ್ತದೆ. ಅದರ ನಿರ್ವಹಣೆ, ರಕ್ಷಣೆಯ ಜವಾಬ್ದಾರಿ ಕೆಎಂಎಫ್ ತೆಗೆದುಕೊಳ್ಳಬೇಕು. ಲಾಭವೂ ಇಲ್ಲದ ನಷ್ಟವೂ ಇಲ್ಲದ ಆಧಾರದ ಮೇಲೆ ಗೋ ರಕ್ಷಣೆ ಮಾಡಬೇಕು ಎಂದರು.

ಕೆಎಂಎಫ್ ನಂ.1 ಸಂಸ್ಥೆಯಾಗಿ ಬೆಳೆಯಬೇಕು
ಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂಬರ್ 1 ಸಂಸ್ಥೆಯಾಗಬೇಕು. ಹೊಸ ತಂತ್ರಜ್ಞಾನ ಬಳಸುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಬೇಕು. ಉತ್ತರ ಕರ್ನಾಟಕದಲ್ಲಿಯೂ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ದಕ್ಷಿಣ ಕರ್ನಾಟಕದ ಮಾದರಿಯಲ್ಲಿಯೇ ಹಾಲು ಉತ್ಪಾದನೆಯಲ್ಲಿ ಅಭಿವೃದ್ಧಿ ಹೊಂದಬೇಕು. ಬೆಳಗಾವಿ, ಬಿಜಾಪುರ , ಬಾಗಲಕೋಟೆ ಸೇರಿದಂತೆ ಉತ್ತರಕರ್ನಾಟಕದಲ್ಲಿ ಹೆಚ್ಚಿನ ನೀರಾವರಿ ಹೆಚ್ಚು ಹಸಿರನ್ನು ಹೊಂದಿರುವ ಪ್ರದೇಶ. ಹಾಲು ಉತ್ಪಾದಕರನ್ನೂ ಹಾಗೂ ಸಂಸ್ಥೆಯನ್ನೂ ರಕ್ಷಣೆ ಮಾಡಬೇಕು ಎಂದರು.

ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವರಾದ ಎಸ್.ಟಿ.ಸೋಮಶೇಖರ್, ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಪ್ರಭು ಚೌಹಾಣ್, ಸಂಸದ ಉಮೇಶ್ ಜಾಧವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.