- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕನಕದಾಸರ ಚಿಂತನೆಗಳು ಇಂದಿಗೆ ಪ್ರಸ್ತುತ : ಎಂ.ಆರ್.ಸತ್ಯನಾರಾಯಣ

Satyaanarayana [1]ಮಂಗಳೂರು: ಕನಕದಾಸರ ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕೀರ್ತನೆಯ ಮೂಲಕ ಕನಕದಾಸರನ್ನು ಜನರ ಬಳಿ ತಲುಪಿಸುವ ಕಾರ್ಯ ಆಗಬೇಕು, ಎಂದು ಕರ್ನಾಟಕ ಸರಕಾರದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಮನ್ವಯಾಧಿಕಾರಿ, ಗಮಕಿ ಎಂ.ಆರ್. ಸತ್ಯನಾರಾಯಣ ಅವರು ಹೇಳಿದರು.
ಅವರು ಶುಕ್ರವಾರ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರದ ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಯಾರು ಕನಕ ಕೀರ್ತನೆಗಳನ್ನು ಹಾಡುತ್ತಾರೋ ಅವರಿಗೆ ಸಾಹಿತ್ಯದ ಜ್ಞಾನದ ಬಗೆಯೂ ಅರಿವು ಬೇಕು. ಸಾಹಿತ್ಯದ ಸೂಕ್ಮ್ಮತೆಗಳನ್ನು ಅರಿತುಕೊಳ್ಳುವ ಪ್ರಯತ್ನ ಅಗತ್ಯ. ಯಾಕೆಂದರೆ ಇಲ್ಲಿ ಪ್ರತೀ ಪದಗಳಿಗೂ ಜೀವ ಇದೆ, ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ, ಸಾಮಾಜಿಕ ಕಳಕಳಿಯಿದೆ. ಸಮಾಜದ ಅಂಕುಡೊಂಕುಗಳನ್ನು ಎತ್ತಿತೋರಿಸಿ ಸಮಸಮಾಜದ ನಿರ್ಮಾಣಕ್ಕೆ ದಾರಿತೋರಿಸಿದವರು ಕನಕದಾಸರು. ಅವರ ಆದರ್ಶ ತತ್ವಗಳು ನಮಗೆಲ್ಲರಿಗೂ, ವಿಶೇಷವಾಗಿ ಯುವ ಸಮಾಜಕ್ಕೆ ಮಾದರಿಯಾಗಿದೆ, ಎಂದು ಹೇಳಿದರು. ಮಂಗಳೂರು ವಿವಿಯ ಕನಕದಾಸ ಸಂಶೋಧನಾ ಕೇಂದ್ರವು ಹಲವಾರು ಉತ್ತಮ ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
Kirthana [2]
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ವಿವಿಯ ಶಾಲಾ ದತ್ತು ಸ್ವೀಕಾರ ಯೋಜನೆಯ ಸಂಯೋಜಕ ಪ್ರೊ. ಪ್ರಶಾಂತ್ ನಾಯ್ಕ್ ಮಾತನಾಡಿ, ಕನಕದಾಸರ ಸಾಹಿತ್ಯ, ಕೀರ್ತನೆಗಳು ಕೃತಿಗಳು ಆಂಗ್ಲಭಾಷೆಯಲ್ಲೂ ಪ್ರಕಟಗೊಳ್ಳಬೇಕು. ಆಗ ಕನಕನ ವಿಚಾರಗಳು ಹೆಚ್ಚು ವಿಸ್ತಾರಗೊಳ್ಳಬಲ್ಲವು, ಎಂದರು. ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ಮಾತನಾಡಿ ಕನಕದಾಸರ ʼರಾಮಧಾನ್ಯ ಚರಿತೆʼಯಲ್ಲಿ ಅಕ್ಕಿ ಮತ್ತು ರಾಗಿ ಹೊಂದಿಕೊಂಡು ಹೋಗಬೇಕೆಂಬ ಆಶಯವಿದೆ. ಸಮ ಸಮಾಜದ ನಿರ್ಮಾಣಕ್ಕೆ ಈ ಹೊಂದಾಣಿಕೆಯ ಮಾರ್ಗ ಬೇಕು ಎಂದು ಹೇಳಿದರು.

ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ಸಹಾಯಕ ಆನಂದ ಕಿದೂರು ವಂದಿಸಿದರು. ನಮಿತಾ ಶೆಟ್ಟಿ ಮತ್ತು ನವ್ಯಶ್ರೀ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

ಏಳು ವಿಭಾಗಗಳಲ್ಲಿ ಕನಕ ಕೀರ್ತನೆ
ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಯೋಜಿತ ಹಾಗೂ ಸ್ವಾಯತ್ತ ಕಾಲೇಜುಗಳ ಪದವಿ, ಸ್ನಾತಕೋತ್ತರ ಪದವಿ, (ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ರಾಜೀವಗಾಂಧಿ ವೈದ್ಯಕೀಯ ಶಿಕ್ಷಣ, ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿವಿಗಳ ವಿದ್ಯಾರ್ಥಿಗಳು ಸೇರಿ), ಬೋಧಕ, ಬೋಧಕೇತರ ಹಾಗೂ ಸಾರ್ವಜನಿಕ ಎಂಬ ಏಳು ವಿಭಾಗಗಳಲ್ಲಿ ಕನಕ ಕೀರ್ತನೆ ಗಾಯನ ಕಾರ್ಯಕ್ರಮ ನಡೆಯಿತು.