- Mega Media News Kannada - https://kannada.megamedianews.com -

ಮಂಗಳೂರು ಭಾರತ್ ಮಾಲ್‌ನ ಪಬ್ಬಾಸ್ ನಲ್ಲಿ ಐಸ್‌ಕ್ರೀಂ ಥಾಲಿ

IThali [1]

ಮಂಗಳೂರು :  ಈಗ ಭಾರತ್ ಮಾಲ್ ನಲ್ಲಿ ಐಸ್ ಕ್ರೀಮ್ ಥಾಲಿಯದ್ದೇ ಸುದ್ದಿ, ಮಂಗಳೂರಿನ ಐಡಿಯಲ್ ಐಸ್‌ಕ್ರೀಂ ಮಾಲೀಕತ್ವದ ಪಬ್ಬಾಸ್(Pabbas) ಐಡಿಯಲ್ ಕೆಫೆಯಲ್ಲಿ ‘ಐಸ್‌ಕ್ರೀಂ ಥಾಲಿ’ಯನ್ನು ಸವಿಯಲು ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ . ಒಂದೇ ಥಾಲಿಯಲ್ಲಿ ಹಲವು ಬಗೆ ಐಸ್‌ಕ್ರೀಂ(Ice cream)  ಐಸ್ ಕ್ರೀಮ್ ಪ್ರಿಯರಿಗೆ ಖುಷಿ ಕೊಟ್ಟಿದೆ.

ಸೌತ್, ನಾರ್ಥ್ ಇಂಡಿಯನ್ ಥಾಲಿ ಮಾದರಿಯಲ್ಲಿ ಇಲ್ಲಿ ಕೂಡ ಐಸ್‌ಕ್ರೀಂ ಥಾಲಿ ರೂಪದಲ್ಲಿ ಗ್ರಾಾಹಕರಿಗೆ ಸಿಗುತ್ತದೆ. ಊಟದ ಮಾದರಿಯಲ್ಲೇ ಐಸ್‌ಕ್ರೀಂ ಥಾಲಿಯ ಮೆನು ಸಿದ್ಧಪಡಿಸಲಾಗಿದೆ. ಹಾಗಾಗಿ ಇದು ಐಸ್‌ಕ್ರೀಂ ಪಾರ್ಲರ್‌ಗೆ ಆಗಮಿಸುವ ಗ್ರಾಾಹಕರು ಊಟದ ಸವಿರುಚಿ ಅನುಭವಿಸಲು ಅಡ್ಡಿಇಲ್ಲ ಎನ್ನುವುದು ಮಾಲೀಕ ಮುಕುಂದ ಕಾಮತ್ ಅಭಿಪ್ರಾಯ.

ಐಸ್‌ಕ್ರೀಂ ಥಾಲಿಯಲ್ಲಿ ಒಟ್ಟು 11 ಬಗೆಗಳಿವೆ. ಬಾಳೆ ಎಲೆಯ ಮಾದರಿಯ ಪ್ಲೇಟಿನಲ್ಲಿ ಐಸ್‌ಕ್ರೀಂ ಥಾಲಿ ಗ್ರಾಹಕರಿಗೆ ಪೂರೈಸಲಾಗುತ್ತದೆ. ಪ್ರತಿ ಐಸ್‌ಕ್ರೀಂ ಕೂಡ ಸೌತ್, ನಾರ್ತ್ ಊಟದ ಥಾಲಿಯ ಒಂದೊಂದು ಮೆನುವನ್ನು ಸಾಂಕೇತಿಕವಾಗಿ ಹೋಲಿಕೆ ಮಾಡಲಾಗಿದೆ. ಇದರಲ್ಲಿ ಸಕ್ಕರೆ(ಉಪ್ಪು ಹೋಲಿಕೆ), ಸ್ಟ್ರಾಬೆರಿ ಹಣ್ಣು(ಉಪ್ಪಿನಕಾಯಿ), ಒಣ ಹಣ್ಣಿನ ಜೆಲ್ಲೊ(ಕೋಸಂಬರಿ) ನಾಲ್ಕು ಫ್ಲೇವರ್‌ಗಳ ಐಸ್‌ಕ್ರೀಂ(ಬಟರ್ ಸ್ಕಾಚ್, ಸ್ಟ್ರಾಬೆರಿ ಸ್ಪೆಷಲ್, ಅರೇಬಿಯನ್ ಡಿಲೈಟ್, ಬ್ಲಾಕ್ ಕರಂಟ್ ಕ್ರಮವಾಗಿ ಬಗೆ ಬಗೆಯ ಪದಾರ್ಥ, ವೆನಿಲ್ಲಾ ಐಸ್‌ಕ್ರೀಂ ಸ್ಲಾಬ್, ಗಾಜರ್ ಹಲ್ವಾ(ಅನ್ನ, ಸಾರು), ಫಿಜ್ಜಾ(ಸ್ವೀಟ್) ಮತ್ತು ಮರ್ಜಿ ಪಾನ್(ಪಾನ್ ಬೀಡಾ) ಈ ಐಟಂಗಳನ್ನು ಒಳಗೊಂಡಿದೆ.

ಒಂದು ಐಸ್‌ಕ್ರೀಂ ಥಾಲಿಗೆ ಆರ್ಡರ್ ನೀಡಿದರೆ ಇಷ್ಟೆಲ್ಲ ಐಟಂಗಳು ಒಂದೇ ಬಾರಿಗೆ ಸಿಗುತ್ತದೆ. ಒಂದು ಪ್ಲೇಟ್ ಐಸ್‌ಕ್ರೀಂ ಥಾಲಿ ದರ 279 ರುಪಾಯಿ. ಐಸ್‌ಕ್ರೀಂ ಥಾಲಿ ತರಿಸಿಕೊಂಡು ಒಬ್ಬರಿಂದ ತೊಡಗಿ ನಾಲ್ಕೈದು ಮಂದಿಯೂ ಶೇರ್ ಮಾಡಿಕೊಂಡು ಸವಿಯಬಹುದು. ಸದ್ಯ ಐಸ್‌ಕ್ರೀಂ ಥಾಲಿ ಮಂಗಳೂರು ಭಾರತ್ ಮಾಲ್‌ನಲ್ಲಿರುವ ಪಬ್ಬಾಸ್ ಐಡಿಯಲ್ ಕೆಫೆಯಲ್ಲಿ ಮಾತ್ರ ಸಿಗುತ್ತಿದೆ.

ಮಂಗಳೂರಿನ ಪಬ್ಬಾಸ್‌ ಐಡಿಯಲ್‌ ಕೆಫೆ ದಶಕಗಳಿಂದ ಗುಣಮಟ್ಟದ ಐಸ್‌ಕ್ರೀಂಗಳಿಗೆ ಹೆಸರುವಾಸಿ. ಬಹಳಷ್ಟು ಬಗೆಯ ವಿಭಿನ್ನ ರುಚಿಯ ಸ್ವಾದಿಷ್ಟಕರ ಐಸ್‌ಕ್ರೀಂಗೆ ಮಾರು ಹೋಗದವರಿಲ್ಲ. ಚಿತ್ರರಂಗದ ಬಹಳಷ್ಟುತಾರೆಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮಂಗಳೂರಿಗೆ ಬಂದು ಪಬ್ಬಾಸ್‌ ಐಸ್‌ಕ್ರೀಂ ಸವಿದಿದ್ದಾರೆ.

ತನ್ನ ಅನನ್ಯ ರುಚಿಯೊಂದಿಗೆ ಪಬ್ಬಾಸ್‌ ಗ್ರಾಹಕರನ್ನು ಸೆಳೆಯುತ್ತಿದೆ. ಮಂಗಳೂರಿಗೆ ಭೇಟಿ ನೀಡಿದವರೆಲ್ಲ ಒಮ್ಮೆ ಪಬ್ಬಾಸ್‌ ಐಡಿಯಲ್‌ ಕೆಫೆಗೆ ಭೇಟಿ ನೀಡಿ ಐಸ್‌ಕ್ರೀಮ್‌ ಸವಿಯುವುದು ವಾಡಿಕೆಯಾಗಿದೆ. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ನೆಚ್ಚಿನ ತಾಣವಾಗಿದೆ.