- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಐಸ್ ಕ್ರೀಮ್ ನ ಸಂಸ್ಥಾಪಕ ಪ್ರಭಾಕರ್ ಕಾಮತ್ ಇನ್ನಿಲ್ಲ

Prabhakara Kamath [1]ಮಂಗಳೂರು: ನಗರದ ಪ್ರಖ್ಯಾತ ಐಡಿಯಲ್ ಐಸ್ ಕ್ರೀಮ್ ನ ಸಂಸ್ಥಾಪಕ ಶಿಬರೂರು ಪ್ರಭಾಕರ್ ಕಾಮತ್ ಅವರು ಶನಿವಾರ ಬೆಳಗ್ಗೆ 3.30ಕ್ಕೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರಿಗೆ 79 ವರ್ಷ ವಯಸ್ಸಾಗಿತ್ತು. ಅವರಿಗೆ ಐಡಿಯಲ್ ಐಸ್‌ ಕ್ರೀಂನ ಮಾಲಕ ಮುಕುಂದ ಕಾಮತ್ ಸೇರಿದಂತೆ ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

‘ಪಬ್ಬ ಮಾಮ್’ ಎಂದೇ ಪ್ರಖ್ಯಾತರಾಗಿದ್ದ ಪ್ರಭಾಕರ್ ಕಾಮತ್ ಅವರು 1975ರಲ್ಲಿ ಮಂಗಳೂರಿನಲ್ಲಿ ಮೊದಲ ಐಡಿಯಲ್ ಐಸ್ ಕ್ರೀಮ್ ಮಳಿಗೆ ಆರಂಭಿಸಿದ್ದರು. ಸ್ವತಃ ಐಸ್ ಕ್ರೀಮ್ ತಯಾರಿ ಕಲಿತಿದ್ದ ಪ್ರಭಾಕರ್ ಕಾಮತ್ ಅವರು 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ತೆರೆದಿದ್ದರು.

ಐಡಿಯಲ್ ಐಸ್ ಕ್ರೀಮ್ ಕರಾವಳಿ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾದ ಐಸ್ ಕ್ರೀಮ್ ಆಗಿದ್ದು, ಮಂಗಳೂರು ನಗರದಲ್ಲೇ ಐದು ಮಳಿಗೆಗಳನ್ನು ಹೊಂದಿದೆ.

ಕಳೆದ ಅಕ್ಟೋಬರ್ 29ರಂದು ಅವರ ಮನೆಯ ಸಮೀಪ ಬಿಜೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರು ಗಾಯಗೊಂಡಿದ್ದರು. ಆ ಬಳಿಕ   ಅವರು ಕೆಲ ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟರು.

ಪರ್ತಗಾಳಿ ಗೋಕರ್ಣ ಮಠದ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು.  ತಮ್ಮ ವೃತ್ತಿ ಜೀವನದಲ್ಲಿ ಅವರು ಐಸ್‌ ಕ್ರೀಂ ಬ್ರ್ಯಾಂಡನ್ನು ಕಟ್ಟಿ ಬೆಳೆಸಿದ ಕಥೆ ಈಗಿನ ಯುವ ಪೀಳಿಗೆಗೆ ಮಾದರಿ. ತಮ್ಮ ಯೌವ್ವನದ ದಿನಗಳಲ್ಲಿ ಅವರು ಮಂಗಳೂರಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಶಿವಕಾಶಿಯ ಪಟಾಕಿ ಮಾರಾಟ ಮಾಡುತ್ತಿದ್ದರು. ಅದು ಕೇವಲ ಎರಡು ತಿಂಗಳ ವ್ಯಾಪಾರ. ವರ್ಷದ ಉಳಿದ ದಿನಗಳಲ್ಲಿ ಅವರು ಐಸ್‌ ಕ್ರೀಂ ಮಾರಾಟ ಮಾಡಲು ನಿರ್ಧರಿಸಿದರು.

ಅದಕ್ಕಾಗಿ ಅವರು ಶೆಟ್ಟಿ ಐಸ್‌ ಕ್ರೀಂನ್ನು ಸಂಪರ್ಕಿಸಿದರು. ಅವರು ಈ ಬ್ರ್ಯಾಂಡ್‌ನ ಡೀಲರ್ ಮಾಡಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಅವರು ಮಾರಾಟ ಮಾಡಲು ನಿರ್ಧರಿಸಿದ ಜಾಗದಲ್ಲೇ ಒಂದು ಅಂಗಡಿಯನ್ನು ತೆರೆದು ಪ್ರಭಾಕರ್ ಕಾಮತ್ ಅವರ ಆಸೆಗೆ ತಣ್ಣೀರೆರಚಿದರು.

ಇದರಿಂದ ಕುಗ್ಗದ ಪ್ರಭಾಕರ್ ಕಾಮತ್ ತಮ್ಮದೇ ಒಂದು ಬ್ರ್ಯಾಂಡ್ ಐಡಿಯಲ್ ಐಸ್‌ ಕ್ರೀಂನ್ನು ಪರಿಚಯಿಸಿದರು. ಅದೀಗ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದು, ದೇಶದಲ್ಲೇ ಅಗ್ರಗಣ್ಯ ಐಸ್‌ಕ್ರೀಂ ಬ್ರ್ಯಾಂಡ್ ಆಗಿದೆ.

ಪ್ರಭಾಕರ ಕಾಮತ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಾಜಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾ ಸಹಿತ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.