- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಕ್ಫ್ ಆಸ್ತಿ ಸಮೀಕ್ಷೆಗೆ ಆದೇಶ: ಶಶಿಕಲಾ ಅ. ಜೊಲ್ಲೆ

Jolle [1]ಬೆಂಗಳೂರು  : ರಾಜ್ಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಹಿತದೃಷ್ಟಿಯಿಂದ ವಕ್ಫ್ ಆಸ್ತಿಗಳ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದು ರಾಜ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶ್ರೀಮತಿ ಶಶಿಕಲಾ ಅ. ಜೊಲ್ಲೆ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಕೇಂದ್ರ ವಕ್ಫ ಪರಿಷತ್ತಿನ ಸದಸ್ಯರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 46 ಸಾವಿರಕ್ಕೂ ವಕ್ಫ್ ಆಸ್ತಿಗಳಿದ್ದು, ಅವುಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಆದೇಶಿಸಲಾಗಿದೆ ಎಂದರು.

ರಾಜ್ಯದಲ್ಲಿ 32,300ಕ್ಕಿಂತ ಹೆಚ್ಚು ವಕ್ಫ್ ಸಂಸ್ಥೆಗಳಿದ್ದು, 46 ಸಾವಿರಕ್ಕಿಂತ ಹೆಚ್ಚು ಆಸ್ತಿಗಳಿವೆ. ಈ ಆಸ್ತಿಗಳ ರಕ್ಷಣೆಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ವಕ್ಫ್ ಸಂಸ್ಥೆಗಳ ಆಸ್ತಿಗಳ ಸಂರಕ್ಷಣೆಗೆ ಕೇಂದ್ರ ವಕ್ಫ್ ಪರಿಷತ್ತಿನಿಂದ ಅನುದಾನ ನೀಡಿದಲ್ಲಿ ರಾಜ್ಯದ ಪಾಲಿನ ಅನುದಾನದೊಂದಿಗೆ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು.

ವಕ್ಫ್ ಸಂಸ್ಥೆಯ ಖಾಲಿ ಜಾಗಗಳನ್ನು ಅಭಿವೃದ್ಧಿ ಪಡಿಸಿದರೆ ಅವುಗಳಿಂದ ಆದಾಯವೂ ಹೆಚ್ಚಾಗುತ್ತದೆ. ಇದರಿಂದ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಾಗುತ್ತದೆ. ಕೇಂದ್ರ ವಕ್ಫ್ ಪರಿಷತ್ತಿನಲ್ಲಿ ಬಾಕಿ ಇರುವ ರಾಜ್ಯದ ಪ್ರಸ್ತಾವನೆಗಳನ್ನು ಅಂಗೀಕರಿಸಿ ಮಂಜೂರಾತಿ ನೀಡುವುದರ ಅಗತ್ಯವಿದೆ. ರಾಜ್ಯದ ಹೆಚ್ಚಿನ ಪ್ರಸ್ತಾವನೆಗಳನ್ನು ಕೇಂದ್ರ ವಕ್ಫ್ ಪರಿಷತ್ತು ಅಂಗೀಕರಿಸಿದರೆ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಿ ಸಮುದಾಯದ ಹೆಚ್ಚಿನ ಹಿತ ಕಾಪಾಡಲು ಅನುಕೂಲವಾಗುತ್ತದೆ ಎಂದು ಶ್ರೀಮತಿ ಜೊಲ್ಲೆ ಹೇಳಿದರು.

ರಾಜ್ಯದ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿರುತ್ತವೆ. ಈ ಆಸ್ತಿಗಳ ಮೌಲ್ಯವೇ ನೂರಾರು ಕೋಟಿಯದ್ದಾಗಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯವಾದಿಗಳನ್ನು ನೇಮಿಸಲು ಆರ್ಥಿಕ ಸಂಪನ್ಮೂಲದ ಕೊರತೆಯಿದೆ. ಇಂತಹ ಪ್ರಕರಣಗಳ ನಿರ್ವಹಣೆಗೆ ನ್ಯಾಯವಾದಿಗಳ ನೇಮಕಾತಿ ವೆಚ್ಚವನ್ನು ಕೇಂದ್ರ ವಕ್ಫ್ ಪರಿಷತ್ತಿನಿಂದ ಭರಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇಂತಹ ಪ್ರಕರಣಗಳು ಬೇಗ ಇತ್ಯರ್ಥವಾಗಿ ಅಂತಹ ಆಸ್ತಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆಯಿದೆ. ಈ ನೌಕರರ ನೇಮಕಕ್ಕೆ ಕೇಂದ್ರ ವಕ್ಫ್ ಪರಿಷತ್‍ನಿಂದ ಅನುದಾನ ನೀಡಬೇಕು ಹಾಗೆಯೇ ರಾಜ್ಯದ ವಕ್ಫ್ ಆಸ್ತಿಗಳ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ವಕ್ಫ್ ಮಂಡಳಿಯು ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲು ಹೆಚ್ಚಿನ ಆಸ್ಥೆ ವಹಿಸಬೇಕು ಎಂದು ಸಚಿವರು ಕೇಂದ್ರ ವಕ್ಫ್ ಮಂಡಳಿ ಸದಸ್ಯರನ್ನು ಒತ್ತಾಯಿಸಿದರು.

ರಾಜ್ಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ-ಕೇಂದ್ರ ವಕ್ಫ್ ಮಂಡಳಿ ಸದಸ್ಯರ ಶ್ಲಾಘನೆ:

ಕೇಂದ್ರ ವಕ್ಫ್ ಮಂಡಳಿ ಸದಸ್ಯರು ಕರ್ನಾಟಕದಲ್ಲಿ ವಕ್ಫ್ ಅಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದೇಶದಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಕರ್ನಾಟಕ ಮತ್ತುಕೇರಳ ರಾಜ್ಯಗಳು ಅತ್ಯುತ್ತಮ ಕ್ರಮಗಳನ್ನು ಕೈಗೊಂಡಿವೆ ಎಂದರು. ಹಾಗೆಯೇ ವಕ್ಪ್ ಸಚಿವರಾಗಿ ಶ್ರೀಮತಿ ಶಶಿಕಲಾ ಜೊಲ್ಲೆಯವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಕೇಂದ್ರ ವಕ್ಫ್ ಮಂಡಳಿ ಸದಸ್ಯರು, ವಕ್ಪ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಸಚಿವರ ಬದ್ಧತೆಯನ್ನು ಪ್ರಶಂಸಿದರು.

ಕೇಂದ್ರದಿಂದ ರಾಜ್ಯದ ವಕ್ಪ್ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಮಂಡಳಿ ಸದಸ್ಯರು ಹೇಳಿದರು.

ಸಭೆಯಲ್ಲಿ ಕೇಂದ್ರ ವಕ್ಫ್ ಮಂಡಳಿ ಸದಸ್ಯರಾದ ನೌಷದ್, ರಯಾಸ್ ಖಾನ್ ಪಥಾಣ್, ಶ್ರೀಮತಿ ಮನಸ್ವಾರಿ ಬೇಗಂ, ಡಾ. ದಾರಕಾಶನ್ ಆಂಧ್ರಬಿ, ಹನೀಫ್ ಅಲಿ ಮತ್ತಿತರರು ಭಾಗವಹಿಸಿದ್ದರು.

ರಾಜ್ಯ ವಕ್ಫ್ ಮಂಡಳಿ ಸಿಇಒ ಯೂಸೂಫ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.