- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶರಣ್ ಪಂಪ್‌ವೆಲ್‌ ಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ : ಬಿರುವೆರ್ ಕುಡ್ಲ

Birver Kudla [1]ಮಂಗಳೂರು : ಬಲ್ಲಾಳ್ ಭಾಗ್ ಘಟನೆಯ ಬಗ್ಗೆ ಪೂರ್ಣ ಮಾಹಿತಿಯಿಲ್ಲದೆ  ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್‌ ಬಿರುವೆರ್ ಕುಡ್ಲ ಸಂಘಟನೆಯ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು  ಸಂಘಟನೆಯ ಮುಖ್ಯಸ್ಥ ಲಕ್ಷ್ಮೀಶ್ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದರು.

ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲದ ಬಗ್ಗೆ ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಬಿರುವರ್ ಕುಡ್ಲ ಕಾನೂನು ಹೋರಾಟ ನಡೆಸಲಿದೆ ಎಂದು ಲಕ್ಷ್ಮೀಶ್ ತಿಳಿಸಿದರು.

ಬಿರುವೆರ್ ಕುಡ್ಲದ ದೀಪು ಶೆಟ್ಟಿಗಾರ್ ಮಾತನಾಡಿ ಶರಣ್ ಪಂಪ್‌ವೆಲ್ ಸಿಟಿ ಸೆಂಟರ್ ಸಹಿತ ಹಲವು ಮುಸ್ಲಿಮರ ಕೇಂದ್ರಗಳಿಂದ ಗುತ್ತಿಗೆ ಹಿಡಿದು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹೋರಾಟ ಮಾಡುವ ಅವರಿಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾವು ಹೆಣ ಹೊರುವುದರಿಂದ ಹಿಡಿದು ಮನೆ ಕಟ್ಟಿ ಕೊಡುವವರೆಗೆ ಸಮಾಜ ಸೇವೆ ಮಾಡುತ್ತಿದ್ದೇವೆ. ಬಲ್ಲಾಳ್‌ ಬಾಗ್‌ನಲ್ಲಿ ಬಿರುವೆರ್ ಕುಡ್ಲ ಜನಪರ ಕೆಲಸ ಮಾಡಿದೆಯೇ ವಿನಃ ಶರಣ್ ಪಂಪ್‌ವೆಲ್‌ರಂತೆ ಸಮಾಜ ಒಡೆಯುವ ಕೆಲಸ ಮಾಡಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕಿಶೋರ್ ಬಾಬು, ವಿದ್ಯಾ, ರಾಕೇಶ್, ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.