- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಳೆಹಾನಿಯಾದ ರೈತರ ಖಾತೆಗೆ ಪರಿಹಾರಧನ: ಸಿಎಂ ಬಸವರಾಜ ಬೊಮ್ಮಾಯಿ

Kolara Crop loss [1]ಕೋಲಾರ :  ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಬೆಳೆ ನಷ್ಟವಾಗಿದ್ದು, ಜಿಪಿಎಸ್ ಆಧಾರಿತ ಸರ್ವೇ ಮಾಡಿ ವಿವರಗಳನ್ನು ಪರಿಹಾರದ ಆ್ಯಪ್ ಗೆ ಅಪಲೋಡ್ ಮಾಡಲು ಸೂಚನೆ ನೀಡಲಾಗಿದೆ.   ವಿವರಗಳು ಅಪಲೋಡ್ ಆದ ಕೂಡಲೇ ತ್ವರಿತವಾಗಿ  ರೈತರ ಖಾತೆಗೆ  ಪರಿಹಾರ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೋಲಾರ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕೋಲಾರ ಪ್ರದೇಶದಲ್ಲಿ  ಮಳೆಯಿಂದಾಗಿ 90% ರಷ್ಟು ರಾಗಿ ಬೆಳೆ ನಾಶ ಆಗಿದೆ.  ಅದಕ್ಕೆ ಕೃಷಿ, ತೋಟಗಾರಿಕೆ,ಕಂದಾಯ, ಆರ್ ಡಿಪಿಆರ್ ಇಲಾಖೆಗಳು ಕೂಡಲೇ ಸಮೀಕ್ಷೆ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ತಕ್ಷಣ ಪರಿಹಾರ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಲಾಗುವುದು ಎಂದರು.

ಇಂದು ನರಸಾಪುರದಿಂದ ಕೋಲಾರದವರೆಗೂ ಬೆಳೆ ನಷ್ಟವನ್ನು ಗಮನಿಸಲಾಗಿದೆ. ರಾಗಿ ಬೆಳೆ, ತೋಟಗಾರಿಕೆ ಬೆಳೆ, ಕಾಯಿಪಲ್ಲೆ, ಹೂವಿನ ತೋಟ ನಷ್ಟವಾಗಿದೆ. ಗಮನಿಸಿದ್ದೇನೆ. ಕೋಲಾರದ ಮುದವಾಡಿ ಕೆರೆ ತುಂಬಿಹರಿದು,ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಪ್ರಾಥಮಿಕ ವರದಿಯ ಪ್ರಕಾರ 9 ಮನೆ ಪೂರ್ಣ ಹಾನಿಯಾಗಿದ್ದು, 790 ಮನೆಗಳಿಗೆ ಭಾಗಶ: ಹಾನಿಯಾಗಿದೆ. 48333 ಹೆ.ಪ್ರದೇಶದಲ್ಲಿ ಬೆಳೆ ನಾಶ ಹಾಗೂ 6966 ಹೆ.ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ನಷ್ಟವಾಗಿದೆ. 189 ಕಿ.ಮೀ.ರಸ್ತೆಗಳು ಹಾಗೂ 34 ಸೇತುವೆಗಳು ಹಾಳಾಗಿರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿನ ಹಣ ಪರಿಹಾರಕ್ಕೆ ಬಳಕೆ:
ಪೂರ್ಣ ಮನೆ ಹಾನಿಗೆ 5 ಲಕ್ಷ ಪರಿಹಾರ ಮೊತ್ತದಲ್ಲಿ ಮೊದಲನೇ ಕಂತಾಗಿ 1 ಲಕ್ಷ ರೂ. ಕೂಡಲೇ ಬಿಡುಗಡೆ ನಂತರ ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ 3 ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಅಂತೆಯೇ ಬಿ ವರ್ಗದಲ್ಲಿ  ಹಾನಿಯಾಗಿರುವ ಮನೆಗೆ 3 ಲಕ್ಷ ಪರಿಹಾರದಲ್ಲಿ 1 ಲಕ್ಷ ರೂ. ಕೂಡಲೇ ಬಿಡುಗಡೆ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಜಿಲ್ಲಾದಿಕಾರಿಗಳ ಪಿಡಿ ಖಾತೆಯಲ್ಲಿ  ಸುಮಾರು 685 ಕೋಟಿ ಇದ್ದು, ಇದಕ್ಕಾಗಿ ಬಳಕೆ ಮಾಡಲು ಸೂಚನೆ ನೀಡಲಾಗಿದೆ.

ರಸ್ತೆ ಹಾಗೂ ಸೇತುವೆ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ:
ರಸ್ತೆ ಮತ್ತು ಸೇತುವೆ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲೆಗೆ ತುರ್ತು ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು, ಒಂದು ಭಾಗ ಎನ್ ಡಿಆರ್ ಎಫ್ ಮಾರ್ಗಸೂಚಿಯಂತೆ ರಿಪೇರಿ  ವೆಚ್ಚ , ದೊಡ್ಡ ಪ್ರಮಾಣದ ಕಾಮಗಾರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸಲಿದೆ. ಈ ಬಗ್ಗೆ ಕೂಡಲೇ ಅಂದಾಜು ಕಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಶಾಲೆ, ಅಂಗನವಾಡಿಗಳು ಹಾನಿಯಾಗಿದ್ದು, ಅದರ ರಿಪೇರಿ ಗೆ ಎನ್ ಡಿಆರ್ ಎಫ್ ನಲ್ಲಿ ಹಣ ನೀಡಲು ಅವಕಾಶವಿದೆ. ಅದನ್ನು ಬಳಸಿಕೊಂಡು ದುರಸ್ತಿ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕೆರೆಗಳನ್ನು ಉಳಿಸುವುದು ಸರ್ಕಾರದ ಪ್ರಥಮ ಆದ್ಯತೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ದೊಡ್ಡ ಪ್ರಮಾಣದ ಕೆರೆ, ಕೆರೆ ಅಂಗಳ ಇರುವ ಪ್ರದೇಶ. ಇವುಗಳು ರಾಜ್ಯದ ಆಸ್ತಿ. ಇವುಗಳನ್ನು ದುರಸ್ತಿ, ಸ್ವಚ್ಛ ಮಾಡಲು ಕೂಡಲೇ ಕ್ರಮ ಕೈಗೊಳ್ಳಲು ಹಾಗೂ ಕೋಡಿಗಳು, ಗೇಟುಗಳು ಶಿಥಿಲಗೊಂಡಿದ್ದಲ್ಲಿ ಕೂಡಲೇ ಅಂದಾಜು ಕಳಿಸಿದ್ದಲ್ಲಿ ಹಣ ಬಿಡುಗಡೆಗೊಳಿಸಲಾಗುವುದು. ಕೆರೆಗಳನ್ನು ಉಳಿಸುವುದು ನಮ್ಮ ಪ್ರಥಮ ಆದ್ಯತೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

 ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿ ಕೂಡಲೇ ತೆರವು:
ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿಯನ್ನು ಕೂಡಲೇ ಗುರುತಿಸಿ, ಒತ್ತುವರಿಯಾದ ಪ್ರದೇಶವನ್ನು ಕೂಡಲೇ ತೆರೆವುಗೊಳಿಸಲು ಆದೇಶ ನೀಡಲಾಗಿದೆ. ಕೆರೆಗಳ ಬಗ್ಗೆ ಸರ್ವೇ ನಂತರ ಬೌಂಡರಿ ನಿಗದಿ ಮಾಡಿಸಿ, ಬೇಲಿ ಅಥವಾ ಗ್ರೀನ್ ಬೇಲಿ ಹಾಕುವ ಮೂಲಕ ಅವುಗಳ ರಕ್ಷಣೆ ಮಾಡಲು ಆದೇಶ ನೀಡಲಾಗಿದೆ.

ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳ ದುರಸ್ತಿಯನ್ನು ಮಳೆ ನಿಂತ 24 ಗಂಟೆಗಳಲ್ಲಿ ಗೆ ಬೆಸ್ಕಾಂಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ ರಾಜ್ಯದಲ್ಲಿ ನವೆಂಬರ್ ನಲ್ಲಿ ಅಕಾಲಿಕ ಮಳೆಯಿಂದಾಗಿ   ಕಟಾವಿಗೆ ಬಂದ ಬೆಳೆ ಹಾನಿಯಾಗಿದೆ.  ಕೆರೆ ಕಟ್ಟೆ ಒಡೆದು,ತಗ್ಗು ಪ್ರದೇಶದಲ್ಲಿ  ಮಳೆ ನೀರು ನುಗ್ಗಿರುವ ಮನೆಗಳಿಗೆ ಕೂಡಲೇ 10,000 ನೀಡಲು ಸೂಚನೆ ನೀಡಿದೆ. ನಂತರ ಹಾನಿಯಾದ ಪ್ರಮಾಣದ ಪ್ರಕಾರ ಪರಿಹಾರವನ್ನು ನೀಡಲಾಗುವುದು ಇನ್ನೂ 4 ದಿನ ಮಳೆ ಬರುವ ಸೂಚನೆ ಇದ್ದು, ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಡಳಿತಗಳು ಸನ್ನದ್ಧರಾಗಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು ತಿಳಿಸಿದರು.

ಈ ಅನಿರೀಕ್ಷಿತ ಮಳೆಯಿಂದ ಆಗಿರುವ ತೊಂದರೆಯಿಂದ ಜನರಿಗೆ ಕೂಡಲೇ ಪರಿಹಾರ ಹಾಗೂ ಅವರ ಸಹಾಯಕ್ಕೆ ಧಾವಿಸುವ ಮುಖಾಂತರ ಅತ್ಯಂತ ದಕ್ಷತೆ ಹಾಗೂ ಕ್ಷಮತೆಯಿಂದ ಈ ಸಂದರ್ಭವನ್ನು ನಿಭಾಯಿಸುತ್ತೇವೆ ಎಂದು ಭರವಸೆ ಇರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ರೈತರು ಪರಿಹಾರ ಮೊತ್ತ ಹೆಚ್ಚಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಚರ್ಚೆ ಆಗಿದ್ದು, ಕೇಂದ್ರ ಈ ಬಗ್ಗೆ ಶೀಘ್ರದಲ್ಲಿ ನಿರ್ಣಯ ಕೈಗೊಳ್ಳಲಿದೆ.

ಕಳೆದ ವರ್ಷ ಬೆಳೆದ ಬೆಳೆಗಳನ್ನು ಕೆಲ ರೈತರು ದಾಸ್ತಾನು ಮಾಡಿದ್ದು, ನೀರು ನುಗ್ಗಿ ಹಾಳಾಗಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಜಮೀನನಲ್ಲಿರುವ ಬೆಳೆದು ನಿಂತ ಹಾಗೂ ಕಟಾವಾಗಿ ಜಮೀನನಲ್ಲೆ ಇರುವ ಪೈರಿಗೆ , ಪರಿಹಾರ ನೀಡಲಾಗುವುದು, ಆದರೆ ದಾಸ್ತಾನು ಮಾಡಿಕೊಂಡಿರುವ ಬೆಳೆಯ ಹಾನಿಗೆ ಪರಿಹಾರ ನಿಯಮದಂತೆ ಆಗದಿರುವ ಕಾರಣ, ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಸಹಾಯ ಮಾಡಲು ಪ್ರಯತ್ನಿಸಲಾಗುವುದು ಎಂದರು.