- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕನಕದಾಸ ಸಾಹಿತ್ಯದ ವೈಚಾರಿಕತೆಯ ಚರ್ಚೆ ನಡೆಯಲಿ: ಎ.ವಿ ನಾವಡ

kanaka-Jayanthi [1]ಮಂಗಳೂರು: ಕನಕ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಸೊತ್ತು ಎಂದು ಮಾತ್ರ ಭಾವಿಸದೆ ವೈಚಾರಿಕ ಮಾದರಿ ಎಂದು ಭಾವಿಸಿ, ಚರಿತ್ರೆ ಅಧ್ಯಯನ ಸೇರಿದಂತೆ ಇತರ ಅಧ್ಯಯನ ಶಿಸ್ತುಗಳ ಮೂಲಕ ಕನಕ ಸಾಹಿತ್ಯವನ್ನು ಜಗತ್ತಿನುದ್ದಕ್ಕೂ ವಿಸ್ತರಿಸುವ ಕಾರ್ಯ ಆಗಬೇಕು ಎಂದು ವಿದ್ವಾಂಸ ಪ್ರೊ.ಎ.ವಿ ನಾವಡ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕನಕ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ‘ಕನಕದಾಸರ ಕಾವ್ಯ: ಕನ್ನಡ ಸಾಂಸ್ಕೃತಿಕ ಅಭಿವ್ಯಕ್ತಿ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. “ಮಂಗಳೂರು ವಿವಿ ಕನಕದಾಸ ಸಂಶೋಧನಾ ಕೇಂದ್ರದ ಮೂಲಕ ಕನಕ ನಿಜವಾಗಿಯೂ ಮಕ್ಕಳಿಗೆ ತಲುಪಿರುವುದು ಶ್ಲಾಘನೀಯ. ಸೊರಗಿದ್ದ ದಾಸ ಸಾಹಿತ್ಯ ಈಗ ಚೇತರಿಸಿಕೊಳ್ಳುತ್ತಿದೆ. ದಾಸ ಸಾಹಿತ್ಯವನ್ನು ಇಂತಹ ಕನಕದಾಸ ಸಂಶೋಧನಾ ಕೇಂದ್ರಗಳು ನಾಡಿನಾದ್ಯಂತ ತಲುಪಿಸುವ ಕಾರ್ಯವನ್ನು ಮಾಡುತ್ತಿವೆ. ಸಾಂಸ್ಕೃತಿಕ ಚಹರೆಗಳು ಬಹುತ್ವದ ನೆಲೆಯಲ್ಲಿ ವಿಸ್ತರಿಸಿ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಕನಕನನ್ನು ಒಂದು ಜಾತಿಗೆ ಸೀಮಿತಗೊಳಿಸಿ ನೋಡುವುದು ಬೇಸರದ ಸಂಗತಿ. ಕನಕ ಅಖಂಡ ಮಾನವತ್ವದ ಸಂಕೇತ,” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ ಪಿ.ಎಸ್ ಯಡಪಡಿತ್ತಾಯ, ಜಾತಿ ಮುಖ್ಯವಲ್ಲ ನೀತಿ ಮುಖ್ಯ ಎಂದು ಸಾರಿದ ಮಹಾನ್ ಮಾನವತಾವಾದಿ ಕನಕದಾಸರು. ಅವರ ಬದುಕು ಮತ್ತು ಸಾಹಿತ್ಯದಲ್ಲಿನ ವೈಚಾರಿಕ ಪ್ರಜ್ಞೆ ಆಧುನಿಕ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ, ಎಂದರು. ಸೋಮಣ್ಣ ಹೊಂಗಳ್ಳಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಕನಕದಾಸರು ಸಾಮಾಜಿಕ ಸಾಮರಸ್ಯದ ಹರಿಕಾರರಾಗಿದ್ದರು, ಎಂದರು.

ಕಾರ್ಯಕ್ರಮದಲ್ಲಿ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆನಂದ ಕಿದೂರು ವಂದಿಸಿದರು. ನವ್ಯಶ್ರೀ ಎಸ್ ಕಾರ್ಯಕ್ರಮ ನಿರೂಪಿಸಿದರು.ಚಂದನಾ ಕೆ.ಎಸ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಚೈತ್ರ ಕೊಪ್ಪಳ ಇವರಿಂದ ಕನಕ ಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ʼಕನಕಾಭಿಯಾನʼದ ರಸಪ್ರಶ್ನೆ ಕಾರ್ಯಕ್ರಮಲ್ಲಿ ವಿಜೇತರಾದ ಮಂಗಳೂರು ವಿವಿ ದತ್ತು ಸ್ವೀಕೃತ ಶಾಲೆಗಳ 44 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು