- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರಿಂದ ಮೂರು ಸ್ವರ್ಣ ಶಿಖರಗಳ ಸಮರ್ಪಣೆ

Vittal Panchalingeshwara Temple [1]ಮಂಗಳೂರು : ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ 1.2 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಸ್ವರ್ಣ ಶಿಖರಗಳ ಸಮರ್ಪಣಾ ಸಮಾರಂಭವು ಏರ್ಪಟ್ಟಿದ್ದು ಇದರ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಿದ್ದರು. ಸಮಾರಂಭವನ್ನು ಕುರಿತಂತೆ ಮಾತನಾಡಿದ ಅವರು ದೇವಾಲಯಗಳ ಮೂಲರೂಪ ಮತ್ತು ಅವುಗಳ ಸಂರಕ್ಷಣೆ ದೊಡ್ಡ ಕಾರ್ಯವಾಗಿದ್ದು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮೂಲ ಸ್ವರೂಪದಲ್ಲೇ ನಿರ್ಮಾಣವಾಗಿರುವುದು ನಿಜಕ್ಕೂ ಅದ್ಭುತ. ಪರಂಪರೆ ರೂಪ ಉಳಿಸಿಕೊಂಡು ಪುನರ್‌ನವೀಕರಣ ನಡೆಯಬೇಕು. ವಿಟ್ಲ ದೇಗುಲ ಈ ರೀತಿ ಭಕ್ತಿ, ಶ್ರದ್ಧೆ, ದಾನಗಳಿಂದ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಮೂರು ಸ್ವರ್ಣ ಶಿಖರಗಳನ್ನು ತಲಾ ಒಂದೊಂದು ಕಿಲೋ ಬಂಗಾರದ ಮೇಲು ಹೊದಿಕೆಯಿಂದ ಅಂದಾಜು 1.2 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮಸ್ಥಳ ಕ್ಷೇತ್ರದ ವತಿಯಿಂದಲೇ ನಿರ್ಮಿಸಲಾಗಿದ್ದು, ಇದನ್ನು ವಿಟ್ಲ ದೇಗುಲದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಪದಾಧಿಕಾರಿಗಳಿಗೆ ಭಕ್ತರ ಸಮಕ್ಷಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಮರ್ಪಿಸಲಾಯಿತು.

ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್.ಕೂಡೂರು, ಅನುವಂಶಿಕ ಆಡಳಿತ ಮೊಕ್ತೇಸರ ಕಷ್ಣಯ್ಯ ಬಲ್ಲಾಳ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಗನ್ನಾಥ ಸಾಲಿಯಾನ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಯಶು ವಿಟ್ಲ ಉಪಸ್ಥಿತರಿದ್ದರು.