- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಳೆ ಹಾನಿಗೆ ಶೀಘ್ರವಾಗಿ ಪರಿಹಾರ ವಿತರಣೆ: ಹಾಸನದಲ್ಲಿ ಕಂದಾಯ‌ ಸಚಿವ ಆರ್ ಅಶೋಕ್

R Ashok [1]ಹಾಸನ : ಹಾಸನ ಜಿಲ್ಲೆಯಲ್ಲಿ ಒಟ್ಟು 47 ಸಾವಿರ ಹೆಕ್ಟೇರ್ ಕೃಷಿ ಹಾಗೂ  ತೋಟಗಾರಿಕೆ ಬೆಳೆ ಕೂಡ ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಸಂತೆಮರೂರು ಮತ್ತು ರಾಮನಾಥಪುರ ಹೋಬಳಿಯಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಕಂದಾಯ ಸಚಿವರು ಮಳೆಯಿಂದ ಹಾನಿಗೊಳಗಾದ ರಾಗಿ ಸೇರಿದಂತೆ ದ್ವಿದಳಧಾನ್ಯ ಬೆಳೆದ ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ ಐದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕಂದಾಯ ಮತ್ತು ಕೃಷಿ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದೇನೆ. ಕೂಡಲೇ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಸಹ ಸೂಚಿಸಿದ್ದು, ಪರಿಹಾರದ ಹಣವನ್ನು ನೇರವಾಗಿ ರೈತರ ಖಾತೆಗೆ ಕ್ರಮ ವಹಿಸಲಾಗಿದೆ ಎಂದರು.

ರೈತರಿಗೆ ನೀಡುತ್ತಿರುವ ಪರಿಹಾರದ ಹಣ ಕಡಿಮೆಯಾಗಿದ್ದು ರೈತರು ಒಂದು ಎಕರೆ ಪ್ರದೇಶಕ್ಕೆ ಸುಮಾರು 15 ರಿಂದ 20 ಸಾವಿರ ಖರ್ಚು ಮಾಡಿ ಬೆಳೆಯನ್ನು ಬೆಳೆದಿರುತ್ತಾರೆ. ಸರ್ಕಾರ ಕೊಡುವ ಪರಿಹಾರ ಕೇವಲ 20% ಮಾತ್ರ. ಹಾಗಾಗಿ NDRF ಮತ್ತು SDRF ಪರಿಹಾರದಲ್ಲಿ ಹೆಚ್ಚು ಹಣ ನೀಡಬೇಕೆಂದು ರೈತರು ಕೂಡ ಕಂದಾಯ ಸಚಿವರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವರು ” ಈ ಬಗ್ಗೆ ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಕನಿಷ್ಟ ಈಗಿರುವ ಪರಿಹಾರಕ್ಕಿಂತ ಮೂರುಪಟ್ಟು ಹೆಚ್ಚು ನೀಡಲು ಮನವಿ ಮಾಡಲಾಗಿದೆ. ಜೊತೆಗೆ ಪರಿಹಾರ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ಕೇಂದ್ರ ಹಣಕಾಸು ಸಚಿವರು ಕೂಡಲೇ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದು, ಈಗಾಗಲೇ 300 ಕೋಟಿ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ” ಎಂದರು.

“ಕಾಫಿ ಬೆಳೆಗಾರರಿಗೆ ಕೂಡ ರಾಜ್ಯ ಸರ್ಕಾರ ಪರಿಹಾರ ನೀಡುತ್ತದೆ. ಶೇಕಡ ಮೂವತ್ತಕ್ಕಿಂತ ಕಡಿಮೆ ಹಾನಿ ಇರುವಲ್ಲಿ ರಾಜ್ಯ ಸರ್ಕಾರ ಪರಿಹಾರ ನೀಡಲು ಬರುವುದಿಲ್ಲ. ಆದರೆ ಕೇಂದ್ರ ಸರ್ಕಾರ ಶೇ.  33 ಬೆಳೆ ಹಾನಿಯಾಗಿರೋ ಪ್ರದೇಶಕ್ಕೆ ಪರಿಹಾರ ನೀಡುತ್ತದೆ. ಹಾಸನ ಜಿಲ್ಲೆಯಲ್ಲಿ ಎನ್ ಡಿ ಆರ್ ಎಫ್ ಮಾನದಂಡದ ಪ್ರಕಾರ 33 ಕೋಟಿ ನಷ್ಟ ಆಗಿದೆ. ಆದರೆ ಇಲ್ಲಿ 100 ಕೋಟಿಗೂ ಹೆಚ್ಚು ಲಾಸ್ ಆಗಿದೆ ಎಂಬುದು ಅಧಿಕಾರಿಗಳ ವರದಿಯಾಗಿದೆ.

ಇನ್ನು ಕೇವಲ ರಾಗಿ ಅಷ್ಟೇ ಅಲ್ಲ. ಎಲ್ಲ ರೀತಿಯ ಬೆಳೆ ಹಾನಿಗೆ ಪರಿಹಾರ ಕೊಡುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ರೈತರಿಗೆ ಭರವಸೆ ನೀಡಿದ ಸಚಿವ ಆರ್ ಅಶೋಕ್, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿ ಬಳಿಕ ಶೀಘ್ರದಲ್ಲೇ ರೈತರ ಖಾತೆಗಳಿಗೆ ಹಣ ಸಂದಾಯ ಮಾಡಲಾಗುವುದು ಎಂದರು.