- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಿಕ್ಷಕನ ತಲೆಯ ಮೇಲೆ ಕಸದಬುಟ್ಟಿ ಹಾಕಿ ವಿಕೃತಿ, ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Student Attack [1]ದಾವಣಗೆರೆ: ತರಗತಿಯಲ್ಲಿ ಹರಡಿದ್ದ ಕಸವನ್ನು ನೋಡಿ ಬುದ್ಧಿ ಹೇಳಿದ ಶಿಕ್ಷಕನ ತಲೆಯ ಮೇಲಕ್ಕೇ ಕಸದಬುಟ್ಟಿ ಹಾಕಿ ವಿಕೃತಿ ಮೆರೆದ ವಿದ್ಯಾರ್ಥಿಗಳ ಮೇಲೆ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ಕುಚೇಷ್ಟೆಯ ವಿಡಿಯೋ ವೈರಲ್ ಆಗಿತ್ತು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬೋಗಾರ್‌, ಡಿಸೆಂಬರ್ 3 ರಂದು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ತರಗತಿಯ ಕೆಲವು ವಿದ್ಯಾರ್ಥಿಗಳು ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದರು. ಈ ಪುಂಡತನವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಕೂಡ ಮಾಡಿದ್ದರು.

ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದೆಂಬ ಉದ್ದೇಶಕ್ಕೆ ಶಿಕ್ಷಕ ಬೋಗಾರ್ ದೂರು ನೀಡಲು ಮುಂದಾಗಿರಲಿಲ್ಲ. ಆದರೆ ಸದರಿ ಕೃತ್ಯದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಶಿಕ್ಷಕರ ಸಮುದಾಯ ಕುಪಿತಗೊಂಡು, ಉದ್ಧಟತನ ತೋರಿದ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಕೋರಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಡಿಡಿಪಿಐಗೆ ವಿಚಾರಣೆ ಮಾಡಿ ವರದಿ ಕೂಡ ನೀಡಲು ಸೂಚಿಸಲಾಗಿತ್ತು. ಈ ಘಟನೆಯ ಬಗ್ಗೆ ಶುಕ್ರವಾರ ಸಂಜೆ ಚನ್ನಗಿರಿ ಪೊಲೀಸ್ ಠಾಣೆಗೆ ಶಿಕ್ಷಕರು ದೂರು ನೀಡಿದ್ದು, ಒಟ್ಟು 6 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಮತ್ತೊಂದೆಡೆ, ತಪ್ಪು ಮಾಡಿದ ವಿದ್ಯಾರ್ಥಿಯೊಬ್ಬ ಶಾಲೆಗೆ ಬಂದಾಗ ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಯಾಚಿಸುವಂತೆ ನಲ್ಲೂರು ಗ್ರಾಮಸ್ಥರು ತಾಕೀತು ಮಾಡಿದ್ದಾರೆ. ಆ ವಿದ್ಯಾರ್ಥಿ ಹಲ್ಲೆಗೊಳಗಾದ ಶಿಕ್ಷಕ ಪ್ರಕಾಶ್ ಬೋಗಾರ್ರ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿರುವ ವಿಡಿಯೋವೊಂದನ್ನು ಚನ್ನಗಿರಿಯ ಎಬಿವಿಪಿ ಕಾರ್ಯಕರ್ತರು ವಾಟ್ಸ್ಆ್ಯಪ್ನಲ್ಲಿ ಪೋಸ್ಟ್ ಮಾಡಿದ್ದಾರೆ.