- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಪಕ್ಷಗಳ ಗದ್ದಲದ ನಡುವೆಯೇ ಮತಾಂತರ ತಡೆ ವಿಧೇಯಕ ಅಂಗೀಕಾರ

Conversion-bill [1]ಬೆಳಗಾವಿ : ಎರಡು ದಿನಗಳ ವಾದ-ವಿವಾದಗಳ ಬಳಿಕ ಇಂದು ಸುದೀರ್ಘವಾಗಿ ನಡೆದ ಚರ್ಚೆಯಲ್ಲಿ  ಮತಾಂತರ ತಡೆ ವಿಧೇಯಕ ಅಂಗೀಕಾರ ಆಗಿದೆ.

2016ರಲ್ಲಿ ಕಾನೂನು ಆಯೋಗ ಸಿದ್ಧಪಡಿಸಿದ್ದ ಮತಾಂತರ ನಿಷೇಧ ವಿಧೇಯಕದ ಕರಡು ಪ್ರತಿಗೆ ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಒಪ್ಪಿಗೆ ನೀಡಿದ್ದನ್ನು ಬಿಜೆಪಿ ಪ್ರದರ್ಶಿಸಿತು. ಅಷ್ಟೇ ಅಲ್ಲ, ಆ ಪ್ರತಿಗೆ ಅಂದಿನ ಸಿಎಂ ಸಿದ್ದರಾಮಯ್ಯ ಕರಡು ಪ್ರತಿ ಒಪ್ಪಿ ಕ್ಯಾಬಿನೆಟ್ಗೆ ಕಡತ ಮಂಡಿಸುವಂತೆ ಸಹಿ ಮಾಡಿದ್ದರ ಬಗ್ಗೆ ಸಚಿವ ಮಾಧುಸ್ವಾಮಿ ಹೇಳುತ್ತಿದ್ದಂತೆ, ಇದಕ್ಕೆ ಉತ್ತರಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಕಕ್ಕಾಬಿಕ್ಕಿಯಾದ ಪ್ರಸಂಗವೂ ನಡೆಯಿತು. ಅಂತಿಮವಾಗಿ ಮಧ್ಯಪ್ರವೇಶಿದ ಬಿ.ಎಸ್. ಯಡಿಯೂರಪ್ಪ, ಚರ್ಚೆ ಮಾಡಲು ಇನ್ನೇನೂ ಉಳಿದಿಲ್ಲ. ವಿಧೇಯಕ ಪಾಸ್ ಮಾಡಿ. ಪ್ರತಿಪಕ್ಷಗಳು ಸಭಾತ್ಯಾಗ ಮಾಡಲೆಂದೇ ಬಾವಿಗೆ ಇಳಿದಿದ್ದಾರೆ. ನೀವ್ಯಾಕೆ ಅವರ ಬಗ್ಗೆ ತಲೆ ಕೆಡಿಸಿಕೊಳ್ತೀರಾ?’ ಎಂದ ಸಿಟ್ಟಿನಿಂದ ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ವಿರೋಧದ ನಡುವೆ ಡಿ.21ರಂದು ಮತಾಂತರ ನಿಷೇಧ ಕಾಯ್ದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು. ಅಂದು ಕೂಡ ಸದನದ ಬಾವಿಗಿಳಿದು ಕಾಂಗ್ರೆಸ್ ತೀವ್ರ ವಿರೋಧಿಸಿತ್ತು.

ಇಷ್ಟಲ್ಲಾ ಬೆಳವಣಿಗೆ ಬಳಿಕ, ವಿಪಕ್ಷಗಳ ಗದ್ದಲ, ಗಲಾಟೆ, ಪ್ರತಿಭಟನೆ ನಡುವೆಯೂ ಮತಾಂತರ ನಿಷೇಧ ಬಿಲ್ ಅನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಯಿತು.

ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ಮತಾಂತರ ನಿಷೇಧ ಕಾಯ್ದೆಯನ್ನ ತೆಗೆದು ಹಾಕ್ತೀವಿ ಎಂದರು.

ಡಿ.ಕೆ. ಶಿವಕುಮಾರ್ ಅವರು ಮತಾಂತರ ನಿಷೇಧ ಕಾಯ್ದೆಯ ಕಾಗದದ ಪ್ರತಿಯನ್ನ ಹರಿದು ಬಿಸಾಕಿದ್ರು. ಇದನ್ನೆಲ್ಲ ನೋಡಿದ ದೇಶದ ಜನತೆ ಕಾಂಗ್ರೆಸ್ ಅನ್ನು ಹರಿದು ಬಿಸಾಕುವ ದಿನ ದೂರ ಇಲ್ಲ ಎಂದು ಬಿಎಸ್ವೈ ಎಚ್ಚರಿಸಿದರು.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ತರುತ್ತಿರುವುದು ಯಾವುದೇ ಧರ್ಮದ ವಿರುದ್ಧ ಅಲ್ಲ. ಯಾವುದೇ ಹಕ್ಕು ಮೊಟಕುಗೊಳಿಸುವ ಉದ್ದೇಶವಿಲ್ಲ, ಈಗಾಗಲೇ ಎಂಟು ರಾಜ್ಯಗಳು ಅನುಷ್ಠಾನ ಮಾಡುತ್ತಿವೆ, 9ನೇ ರಾಜ್ಯ ಕರ್ನಾಟಕ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಕ್ಷಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.