- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂದಿ ಈಗ ಜಾಗತಿಕ ಭಾಷೆ: ಜಾನ್ ಎ. ಅಬ್ರಹಾಂ

World Hindi Day [1]ಮಂಗಳೂರು: ಹಿಂದಿ ಭಾಷೆ ಉಪನ್ಯಾಸಕ ವೃತ್ತಿಗೆ ಸೀಮಿತವಾಗಿರದೆ ಇತರ ಕ್ಷೇತ್ರಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳಿವೆ, ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಜಭಾಷಾ ವಿಭಾಗದ ವರಿಷ್ಠ ಪ್ರಬಂಧಕ ಜಾನ್ ಎ. ಅಬ್ರಹಾಂ ತಿಳಿಸಿದರು.

ನಗರದ ವಿಶ್ವವಿದ್ಯಾಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗದ ವತಿಯಿಂದ ಮಂಗಳವಾರ ನಡೆದ ವಿಶ್ವ ಹಿಂದಿ ದಿನಾಚರಣೆಯಲ್ಲಿ ʼಹಿಂದಿ ಭಾಷೆಯಲ್ಲಿ ಉದ್ಯೋಗಾವಕಾಶಗಳುʼ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಆನಿವಾಸಿ ಭಾರತೀಯರು ವಿಶ್ವಾದ್ಯಂತ ಹಿಂದಿಯನ್ನು ಬಳಸುತ್ತಿರುವುದರಿಂದ ಅದೊಂದು ಜಾಗತಿಕ ಭಾಷೆಯಾಗಿ ಬದಲಾಗಿದೆ, ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ನಾವು ನಮ್ಮ ಮಾತೃಭಾಷೆಗೆ ಗೌರವ ನೀಡುವುದರ ಜೊತೆಗೆ ರಾಷ್ಟ್ರೀಯ ಭಾಷೆಯಾದ ಹಿಂದಿ ಕಲಿಯುವಿಕೆಗೂ ಮಹತ್ವ ಕೊಡಬೇಕು, ಎಂದರು.

ಹಿಂದಿ ಪದವಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ರಾವ್ ಅತಿಥಿಗಳನ್ನು ಸ್ವಾಗತಿಸಿದರೆ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ ಆರ್ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.