- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ʼನವಿಲುಗರಿʼ ಕವನ ಸಂಕಲನ ಬಿಡುಗಡೆ

Navilu-Gari [1]ಮಂಗಳೂರು: ಜೀವನ ಎದುರಿಸಲು ಸೃಜನಶೀಲತೆ ಅಗತ್ಯ. ಕಾವ್ಯವೆಂಬ ಸೃಜನಶೀಲ ಹವ್ಯಾಸ ಕಷ್ಟಗಳಿಂದ ಹೊರಬಂದು ನಮ್ಮನ್ನು ನಾವೇ ಸಾಂತ್ವನಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ಡಾ. ಭಾರತಿ ಪಿಲಾರ್ ಅವರ ʼನವಿಲುಗರಿʼ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಕವನ ಸಂಕಲನದ 40 ಕವನಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ. ಭಾವನೆಗಳ ಹೊಯ್ದಾಟ, ಕಟು ವಾಸ್ತವ ನಮ್ಮನ್ನು ನಾವು ಮರೆಯುವಂತೆ ಮಾಡುತ್ತದೆ. “ಮೊದಲ ಪ್ರಯೋಗದಲ್ಲೇ ಕವಯತ್ರಿಯ ಭಾಷಾ ಪ್ರೌಢಿಮೆ, ಕಾವ್ಯ ಕಟ್ಟುವ ಸಾಮರ್ಥ್ಯ ಮೆಚ್ಚುವಂತದ್ದು,” ಎಂದರು.

ಕೃತಿ ಪರಿಚಯ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೊಜಕ ಡಾ. ಗಣೇಶ್ ಅಮೀನ್ ಸಂಕಮಾರ್, ಈ ಕವನಗಳಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿಯಿದೆ, ನಾಶಪಡಿಸುವವರ ಬಗ್ಗೆ ಭಯವಿದೆ. ಪರಂಪರೆ, ಪುರಾಣ, ವಾಸ್ತವತೆ ಸೇರಿದಂತೆ ಪ್ರತಿ ಕವಿತೆಗಳು ಹೊಸ ಪ್ರಪಂಚ ತೋರಿಸುತ್ತವೆ, ಎಂದರು. ತಮ್ಮ ಮೊದಲ ಕವನ ಸಂಕಲನದ ಬಗ್ಗೆ ಮಾತನಾಡಿದ ಕಂಪ್ಯೂಟರ್ ವಿಜ್ಞಾನ ಪ್ರಾಧ್ಯಾಪಿಕೆ ಡಾ. ಭಾರತಿ ಪಿಲಾರ್, “ನವಿಲುಗರಿ ಕವನ ಸಂಕಲನದ ಮೂಲಕ ನನ್ನ ಭಾವನೆಗಳಿಗೆ ಶಬ್ದ ರೂಪ ನೀಡಿದ್ದೇನೆ. ಬಾಲ್ಯದ ನೆನಪುಗಳಿಗೆ ಇದು ತಳುಕುಹಾಕಿಕೊಂಡಿದೆ,” ಎಂದರಲ್ಲದೆ ಎಲ್ಲರ ಸಹಕಾರ ನೆನೆದರು.

ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲೆ ಡಾ. ಅನಸೂಯ ರೈ, ಎಲ್ಲಾ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಡಾ. ಭಾರತಿ ಪಿಲಾರ್, ಕೆಲಸದೊತ್ತಡದ ಮಧ್ಯೆಯೂ ಕವಯತ್ರಿಯಾಗಿ ರೂಪುಗೊಂಡಿರುವುದು ಸಂತಸ ತಂದಿದೆ, ಎಂದರು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಅತಿಥಿಗಳನ್ನು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ನಟೇಶ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಡಾ. ಭಾರತಿ ಪಿಲಾರ್ ಅವರ ಪತಿ ನಾಗೇಶ್ ಗಟ್ಟಿ ಪಿಲಾರ್ ಮೇಲ್ಮನೆ, ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.