- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್‌ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ : ಹರಿಕೃಷ್ಣ ಬಂಟ್ವಾಳ್

Harikrishna Bantwal [1]ಮಂಗಳೂರು :  ಕಾಂಗ್ರೆಸ್‌ನ ಅಸ್ತಿತ್ವ ಮುಗಿಯುತ್ತಾ ಬಂದಿರುವ ಕಾರಣ ಇದೀಗ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ. ಆದರೆ ಆ ಕಾರ್ಯಕ್ಕೆ ನಾರಾಯಣ ಗುರುಗಳೇ ಬೆಂಕಿ ಹಾಕುತ್ತಾರೆ ಎಂದು ಬಿಜೆಪಿ ನಾಯಕ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನೀಡಿಲ್ಲ ಎಂಬ ವಿವಾದ ಸೃಷ್ಟಿ ಕಮುನಿಷ್ಟ್ ಹಾಗೂ ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಜತೆ ಈಗಾಗಲೇ ಮಾತುಕತೆ ನಡೆದಿದ್ದು, 2023ರ ದೇಶದ ಗಣರಾಜ್ಯೋತ್ಸವ ಪೆರೇಡ್‌ಗೆ ರಾಜ್ಯದಿಂದ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಕಳುಹಿಸುವ ನಿರ್ಣಯಕ್ಕೆ ಬಂದಿದ್ದಾರೆ. ಇಂದೇ ಹೋಗಿ ಪೆರೇಡ್‌ನಲ್ಲಿ ಅವಕಾಶ ನೀಡಬೇಕೆಂದರೆ ಅದು ದಸರಾ ಕಾರ್ಯಕ್ರಮ ಅಲ್ಲ ಎಂದು ಅವರು  ಹೇಳಿದರು.

ಈ ವಿವಾದ ಸೃಷ್ಟಿಯಿಂದ ಹಲವರ ಮುಖವಾಡ ಬಯಲಾಗಿದೆ. ಈ ವಿವಾದ ಸೃಷ್ಟಿಯಾಗಿದ್ದು, ನಾರಾಯಣಗುರಗಳ ಕೇಂದ್ರ ಸ್ಥಳ ಶಿವಗಿರಿಯಿಂದ ಅಲ್ಲ ಬದಲವಾಗಿ ಕುತಂತ್ರಿ ಕಮ್ಯುನಿಸ್ಟರ ಗರ್ಭಗುಡಿಯಿಂದ ಹಾಗೂ ಅತಂತ್ರ, ಪರತಂತ್ರ ಕಾಂಗ್ರೆಸ್‌ನ ಷಡ್ಯಂತ್ರದಿಂದ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಧಮ್ ಇದ್ದಲ್ಲಿ ಕೇಂದ್ರ ಸರಕಾರ ನಾರಾಯಣ ಗುರುಗಳ ಸ್ತಬ್ಧ ಚಿತ್ರದ ಬದಲಿಗೆ ಶಂಕಾರಾಚಾರ್ಯರ ಸ್ತಬ್ಧಚಿತ್ರವನ್ನು ಮಾಡುವಂತೆ ಹೇಳಿದ್ದರ ಲಿಖಿತ ಪ್ರತಿಯನ್ನು ತೋರಿಸಬೇಕು ಎಂದು ಅವರು ಸವಾಲು ಹಾಕಿದರು.

ಕೇರಳದಲ್ಲಿ ಓಟಿಗಾಗಿ ಕಮ್ಯುನಿಷ್ಟರು ಎಬ್ಬಿಸಿರುವ ವಿವಾದ ಇದಾಗಿದ್ದು, ನಾರಾಯಣಗುರುಗಳ ಮೇಲಿನ ಭಕ್ತಿ, ಗೌರವ ಅಥವಾ ಅವರ ವಿಚಾರವನ್ನು ಜಗತ್ತಿಗೆ ತೋರಿಸಬೇಕೆಂಬ ಕಾಳಜಿಯಿಂದ ಅಲ್ಲ. ಈ ಬಗ್ಗೆ ಕೇರಳದ ಕಾಂಗ್ರೆಸ್ ನಾಯಕರಾರೂ ಚಕಾರ ಎತ್ತಿಲ್ಲ ಎಂದರು.

2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಮಂಗಳೂರಿಗೆ ಭೇಟಿ ನೀಡಿದಾಗ ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿಯವರು ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಆದರೆ ಅಂದು ಸಿದ್ಧರಾಮಯ್ಯನವರು ಐವನ್ ಡಿಸೋಜಾರ ಮನೆಯಲ್ಲಿ ಹಂದಿ ಮಾಂಸ ತಿಂದು, ಕೆಂಪು ನೀರು ಕುಡಿದು ವಾಪಾಸು ಹೋಗಿದ್ದರು. ಆ ಸಂದರ್ಭ ಜನಾರ್ದನ ಪೂಜಾರಿಯವರು ಸಿದ್ಧರಾಮಯ್ಯಗೆ ನಾರಾಯಣ ಗುರುಗಳು ಬುದ್ಧಿಕಲಿಸುತ್ತಾರೆ ಎಂದಿದ್ದರು. ಅಂದು ಸಿದ್ಧರಾಮಯ್ಯ ಕುದ್ರೋಳಿ ಕ್ಷೇತ್ರಕ್ಕೆ ಮಾಡಿದ್ದು ಅವಮಾನವಲ್ಲವೇ? ಅವರ ಮಾಧ್ಯಮದ ಪ್ರಮುಖರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಕುದ್ರೋಳಿ ಕ್ಷೇತ್ರವನ್ನು ಜನಾರ್ದನ ಪೂಜಾರಿಯವರು ನಾರಾಯಣ ಗುರುಗಳಿಗೆ ಕಟ್ಟಿದ ಗೋರಿ ಎಂದು ಹೇಳಿದ್ದರು. ಲೇಡಿಹಿಲ್ ವೃತ್ತಕ್ಕೆ ನಾರಾಯಣಗುರುಗಳ ಹೆಸರನ್ನು ಮನಪಾ ಸಭೆಯಲ್ಲಿ ನಿರ್ಣಯಿಸಿದಾಗ ಕಾಂಗ್ರೆಸ್‌ನ ನಾಯಕರು ಆಕ್ಷೇಪಿಸಿದ್ದರು. ಆವಾಗ ನಾರಾಯಣ ಗುರುಗಳಿಗೆ ಅವಮಾನ ಆಗಿಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರು ಪ್ರತಿದಿನ ನಾರಾಯಣಗುರುಗಳ ಸ್ತ್ರೋತ್ರವನ್ನು ಸ್ಮರಿಸುತ್ತಾರೆ. ಅವರು ನಾರಾಯಣಗುರುಗಳ ಬಗ್ಗೆ ಅಧ್ಯಯನ ಮಾಡಿದಷ್ಟು ಕಾಂಗ್ರೆಸ್‌ನ ಯಾರೊಬ್ಬರೂ ಮಾಡಿಲ್ಲ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಡಿಕೆಶಿಯವರು ಸ್ಮರಿಸುತ್ತಾರೆಯೇ? ಸಂಸದ ನಳಿನ್, ನನ್ನ ಮನೆ ಸೇರಿದಂತೆ ಬಿಜೆಪಿಯ ಅನೇಕ ನಾಯಕರ ಮನೆಯಲ್ಲಿ ನಾರಾಯಣಗಳ ಫೋಟೋವನ್ನಿಟ್ಟು ಆರಾಧಿಸಲಾಗುತ್ತದೆ ಎಂದು ಹರಿಕೃಷ್ಣ ಬಂಟ್ವಾಳ್ ಕಾಂಗ್ರೆಸ್ ಹಾಗೂ ಕಮ್ಯುನಿಷ್ಟ್ ಪಕ್ಷದ ವಿರುದ್ಧ ಆರೋಪಗಳ ಸುರಿಮಳೆಗೈದರು.

ಜನಾರ್ದನ ಪೂಜಾರಿಯವರ ನಾರಾಯಣಗುರುಗಳ ಸ್ತಬ್ಧಚಿತ್ರ ಮೆರವಣಿಗೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಆದರೆ ಮೆರವಣಿಗೆಯಲ್ಲಿ ನಾರಾಯಣ ಗುರುಗಳ ಬಾವುಟ ಹಾರಾಡಬೇಕು. ಪೂಜಾರಿಯವರು 40 ವರ್ಷ ರಾಜಕೀಯದಲ್ಲಿದ್ದವರು. ಆಗಿನಿಂದಲೂ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಪೆರೇಡ್‌ಗೆ ಕೊಂಡು ಹೋಗಲು ಆಗಿಲ್ಲ. ಹಾಗಾಗಿ ಇದೀಗ ಯಾರೋ ಕುಮ್ಮಕ್ಕು ನೀಡಿ ಅವರನ್ನು ಈ ಮೆರವಣಿಗೆಗೆ ಪ್ರೇರೇಪಿಸಿದ್ದಾರೆ. ಕಾಂಗ್ರೆಸ್‌ನ ಅಸ್ತಿತ್ವ ಮುಗಿಯುತ್ತಾ ಬಂದಿರುವ ಕಾರಣ ಇದೀಗ ನಾರಾಯಣಗುರುಗಳನ್ನು ಮುಂದಿಟ್ಟು ರಾಜಕೀಯ ಮಾಡಿ ಮತ ಗಿಟ್ಟಿಸುವ ಯತ್ನವನ್ನು ಮಾಡುತ್ತಿದೆ. ಆದರೆ ಆ ಕಾರ್ಯಕ್ಕೆ ನಾರಾಯಣ ಗುರುಗಳೇ ಬೆಂಕಿ ಹಾಕುತ್ತಾರೆ. ಹಿಂದೆ ಲಿಂಗಾಯಿತ ಸಮುದಾಯ ಒಡೆಯಲು ಹೋದಾಗ ಅದೇ ಪರಿಸ್ಥಿತಿ ಆಗಿದೆ. ಇದೀಗ ನಾರಾಯಣ ಗುರುಗಳೇ ಕಾಂಗ್ರೆಸನ್ನು ಸುಡಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ರಾಧಾಕೃಷ್ಣ, ವಿಜಯ ಕುಮಾರ್ ಉಪಸ್ಥಿತರಿದ್ದರು.