- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆರ್ಯಭಟ ಪ್ರಶಸ್ತಿ ವಿಜೇತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

Sheela Diwakar [1]ಮಂಗಳೂರು :  ಆರ್ಯಭಟ ಪ್ರಶಸ್ತಿ ಪುರಸ್ಕೃತೆ, 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಶೀಲಾ ದಿವಾಕರ್ (53) ಬುಧವಾರ ನಿಧನರಾಗಿದ್ದಾರೆ.

‘ಕರಾವಳಿ ಕೋಗಿಲೆ’ ಖ್ಯಾತಿಯ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ಶೀಲಾ ದಿವಾಕರ್ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ  ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಸ್ವೀಕರಿಸಿದ ಕರಾವಳಿ ಕೋಗಿಲೆ, 3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಮೆಚ್ಚುಗೆಯ ಕಾರ್ಯಕ್ರಮ ನೀಡಿದ ಖ್ಯಾತ ಗಾಯಕಿಯಾಗಿದ್ದರು.

ಶೀಲಾರವರು ಮಂಗಳೂರು, ಉಡುಪಿ, ಮತ್ತು ಕಾಸರಗೋಡು ತ್ರಿವಳಿ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಮ್ಮನ ಮಮತೆಯಿತ್ತು ಸಂಗೀತ ಕಲಿಸಿದ ಆರ್ಯಭಟ ಪುರಸ್ಕೃತೆ. ಭರತನಾಟ್ಯ ಹಾಡುಗಾರಿಕೆ, ಶಾಸ್ತ್ರೀಯ ಕಛೇರಿ, ಸುಗಮ ಸಂಗೀತದಲ್ಲಿ ಉತ್ಕೃಷ್ಟ ಗುಣಮಟ್ಟದ ಆಯ್ಕೆಯಾಗಿದ್ದ ಇವರು ಯಾವುದೇ ರಾಗ – ತಾಳದಲ್ಲಿ ಸರ್ವಾಂಗ ಸೊಗಸಾಗಿ ಹಾಡಬಲ್ಲ ಮೇರು ಪ್ರತಿಭೆಯಾಗಿದ್ದರು.

ದುರಂತವೆಂದರೆ, ಕೆಲದಿನಗಳ ಹಿಂದೆ ದೇಹಸ್ಥಿತಿಯಲ್ಲಿ ಒಮ್ಮಿಂದೊಮ್ಮೆಗೆ ಏರುಪೇರು ಕಂಡುಬಂದಿದ್ದ ಕಾರಣ ಪ್ರಜ್ಞಾರಹಿತ ಸ್ಥಿತಿಯಲ್ಲೇ ಇದುವರೆಗೂ ಮಂಗಳೂರಿನ ಕೆ.ಎಂ.ಸಿ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಚಾನಕ್ಕಾಗಿ ಆರೋಗ್ಯ ಉಲ್ಬಣಿಸಿದ ಅವರ ಶೀಘ್ರ ಚೇತರಿಕೆಗಾಗಿ ಸಾವಿರಾರು ಶಿಷ್ಯಬಳಗದ ಮತ್ತು ಅಭಿಮಾನಿ ವೃಂದದ ಅವಿರತ ಪ್ರಾರ್ಥನೆ ನಡೆಯುತ್ತಲೇ ಇತ್ತು. ಆದರೆ, ಭಗವಂತನ ಕರೆಗೆ ಓಗೊಟ್ಟು ನಮ್ಮೆಲ್ಲರ ಪ್ರೀತಿಯ ಶೀಲಕ್ಕ ಇಹಲೋಕ ತ್ಯಜಿಸಿ ಗಾನಜಗತ್ತಿಗೈದಿದ್ದಾರೆ. ಆ ಮೂಲಕ ಬಹುದೊಡ್ಡ ಸಂಖ್ಯೆಯ ಶಿಷ್ಯಬಳಗಕ್ಕೆ ಇನ್ನೆಂದೂ ತುಂಬಲಾರದ ನಷ್ಟವೊಂದು ಎದುರಾಗಿದೆ. ಭರತನಾಟ್ಯ ಹಿನ್ನೆಲೆ ಗಾಯನದಲ್ಲಿ, ಸಂಗೀತ ಕಛೇರಿಯಲ್ಲಿ ಕೇಳಿಬರುತ್ತಿದ್ದ ಅಮೂಲ್ಯ ಸ್ವರಸುಧೆಯೊಂದು ಬತ್ತಿಬರಿದಾಗಿದೆ.