- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಕ್ಕಳ ಪಾಲನಾ ಸಂಸ್ಥೆಗಳನ ನೊಂದಾವಣೆ ಮಾಡುವುದು ಹಾಗೂ ನವೀಕರಣ ಮಾಡುವುದು ಕಡ್ಡಾಯ: ಜಿಲ್ಲಾಧಿಕಾರಿ

KV Rajendra [1]ಮಂಗಳೂರು : ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಲು ಕ್ರಮವಹಿಸುವಂತೆ ಸೂಚಿಸಿದರಲ್ಲದೆ ಕೂಡಲೇ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಅವರು ಜ. 29 ರ ಶನಿವಾರ ರಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಮಕ್ಕಳ ಪಾಲನಾ ಸಂಸ್ಥೆಗಳನ ನೊಂದಾವಣೆ ಮಾಡುವುದು ಹಾಗೂ ನವೀಕರಣ ಮಾಡುವುದು ಕಡ್ಡಾಯವಾಗಿದ್ದು ಕೂಡಲೇ ಸಂಸ್ಥೆಗಳು ನೋಂದಾವಣೆ ಮಾಡಿಸಿಕೊಳ್ಳಬೇಕು, ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕೋವಿಡ್‌ನಿಂದ ಪೋಷಕರಿಬ್ಬರನ್ನೂ ಕಳೆದುಕೊಂಡು ವಿಸ್ತೃತ ಕುಟುಂಬದ ಸದಸ್ಯರ ಆರೈಕೆಯಲ್ಲಿರುವ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು ರೂ.3,500 ಧನಸಹಾಯವನ್ನು ಈ ಮಕ್ಕಳ ಸಮಗ್ರ ರಕ್ಷಣೆ ಮತ್ತು ಪಾಲನೆಗಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರವು ಕೂಡ ಪಿ.ಎಮ್. ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿಯಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳ ಆರೋಗ್ಯ ವಿಮೆ, ಶಿಕ್ಷಣ ಮತ್ತು ಸಮಾಜದಲ್ಲಿ ಸ್ವಾಲಂಬಿಗಳಾಗಿ ಜೀವನವನ್ನು ನಿರ್ವಹಿಸಲು ಅನುವಾಗುವಂತೆ ನೆರವಿನ ಜೊತೆಗೆ ಪ್ರತಿ ಮಗುವಿಗೆ 23 ವರ್ಷ ತುಂಬಿದ ನಂತರ ತಲಾ ರೂ. 10 ಲಕ್ಷಗಳನ್ನು ಘೋಷಿಸಿದ್ದು, ಈಗಾಗಲೇ 10 ಅನಾಥ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯಿಂದ ಅನುಮೋದನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿರುವ ಎಚ್.ಐ.ವಿ ಮತ್ತು ಏಡ್ಸ್ ಭಾದಿತ ಮಕ್ಕಳಿಗೆ ಸರ್ಕಾರದಿಂದ ನೀಡುವ ಸಹಾಯ ಧನವನ್ನು ಮಗುವಿನ ಆರೋಗ್ಯ ಸುಧಾರಣೆಗಾಗಿ ಮಾತ್ರ ಬಳಸುವಂತೆ ನೋಡಿಕೊಳ್ಳಬೇಕು ಜೊತೆಗೆ ಅಧಿಕಾರಿಗಳು ಸೋಂಕಿತ ಮಕ್ಕಳ ಮನೆಗಳಿಗೆ ಬೇಟಿನೀಡಿ ಅವರ ಆರೋಗ್ಯವನ್ನು ವಿಚಾರಿಸಿ ವರದಿಯನ್ನು ನೀಡುವಂತೆ ತಿಳಿಸಿದರು.

ಕರ್ನಾಟಕ ಮಕ್ಕಳ ಸುರಕ್ಷಾ ನೀತಿ-2016 ಯನ್ನು ಮದರಸ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸುವ ಬಗ್ಗೆ ಡಿ.ಡಿ.ಪಿ.ಐ, ಡಿ.ಡಿ.ಪಿ.ಯು, ಮತ್ತು ಅಲ್ಪಸಂಖ್ಯಾತ ಇಲಾಖೆಯವರ ಜೊತೆ ಸಭೆ ನಡೆಸುವಂತೆ ಜಿಲ್ಲಾದಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣ ಆಯೋಗದ ಸದಸ್ಯರಾದ ಶಂಕರಪ್ಪ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪಾಪ ಬೋವಿ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.