- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮಂಗಳೂರಿಗೆ ವಾಪಸ್

Anusha [1]ಮಂಗಳೂರು : ಉಕ್ರೇನ್ ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿನಿ ಅನುಷಾ ಭಟ್ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದ್ದಾರೆ.  ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಬಂದಿಳಿದ ಮಗಳನ್ನು ಹೆತ್ತವರು ಮತ್ತು ಶಾಸಕ, ಸಂಸದರು ಬರಮಾಡಿಕೊಂಡರು.

ಗುರುವಾರ  ಮಧ್ಯಾಹ್ನ 1 ಗಂಟೆ ಸುಮಾರಿಗೆ ಅನುಷಾ ಮಂಗಳೂರು ವಿಮಾನ ನಿಲ್ದಾಣ ತಲುಪಿದರು. ಹೆತ್ತವರು, ಸಂಬಂಧಿಕರು ಅವರನ್ನು ಬರಮಾಡಿಕೊಂಡರು. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಅನುಷಾ ಅವರನ್ನು ಸ್ವಾಗತಿಸಿದರು.

ಅನುಷಾ ಉಕ್ರೇನ್ ನ ವಿನ್ನೆಸ್ಟಿಯಾ ನಗರದ ನ್ಯಾಶನಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದು  ಏಜೆಂಟ್ ಗಳ ಮುಖಾಂತರ ಪಾಸ್ ಪಡೆದುಕೊಂಡು ಉಕ್ರೇನ್ ಗಡಿ ದಾಟಿದ್ದಾರೆ. ಆದರೆ ನಾವು ತಲುಪಿದ ಗಡಿ ಯಾವುದು ಎಂಬ ಅರಿವು ನಮಗಿರಲಿಲ್ಲ. ರೊಮೇನಿಯಾ ಗಡಿ ದಾಟಿದ ಬಳಿಕ ಕೆಲ ಕಾಲ ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ಅಲ್ಲಿ ಯುಕ್ರೇನ್ ನ ಸೇನಾ ಅಧಿಕಾರಿಗಳಿದ್ದರು. ರೊಮೇನಿಯಾ ಗಡಿಯಲ್ಲಿ ವಲಸೆ ಕಚೇರಿ ತಲುಪಿದ ಮೇಲೆ ನಮ್ಮನ್ನು ಆಶ್ರಯತಾಣವೊಂದಕ್ಕೆ ಕರೆದೊಯ್ಯಲಾಯಿತು. ಭಾರತ ಸರಕಾರ ಅಲ್ಲಿ ತಂಗಲು ನಮಗೆ ವ್ಯವಸ್ಥೆ ಮಾಡಿತ್ತು. ಬಳಿಕ ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಕರೆ ತರಲಾಗಿದ್ದು, ಅಲ್ಲಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇನೆ ಎಂದು ಅನುಷಾ ತಿಳಿಸಿದ್ದಾರೆ.