- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯಲ್ಲ – ಹೈಕೋರ್ಟ್

Hijab Ban [1]ಬೆಂಗಳೂರು: ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತವನ್ನು ವಿರೋಧಿಸಿ ಕರಾವಳಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ವಿವಾದ ಆರಂಭಸಿತ್ತು. ಬಳಿಕ ನಡೆದ ಬೆಳವಣಿಗೆಗಳಲ್ಲಿ ವಿವಾದ ಕೋರ್ಟ್ ಮೆಟ್ಟಲೇರಿತ್ತು. ಈಗ ಹೊರಬಿದ್ದ ಕೋರ್ಟ್ ತೀರ್ಪಿನಂತೆ  ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಸಮವಸ್ತ್ರವನ್ನು ಕಡ್ಡಾಯ ಮಾಡುವುದು ಸಂವಿಧಾನದ 19 (1) (ಎ) ಮತ್ತು 25 ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ನ ತ್ರಿಸದಸ್ಯ ಪೀಠ ಮಂಗಳವಾರ ಮಹತ್ವದ ತೀರ್ಪು ನೀಡಿ ಹಿಜಾಬ್ ಕುರಿತ ಅರ್ಜಿಯನ್ನು ವಜಾಗೊಳಿಸಿದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು ಮಂಗಳವಾರ(ಮಾರ್ಚ್ 15)ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಸೇರಿದಂತೆ ಮೂವರು ನ್ಯಾಯಾಧೀಶರನ್ನೊಳಗೊಂಡ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ.

ಆರ್ಟಿಕಲ್ 19(1) (ಎ) (ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಲಂ 21 (ಗೌಪ್ಯತೆ) ಅಡಿಯಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಶಾಲಾ ಸಮವಸ್ತ್ರವನ್ನು ಕಾನೂನುಬದ್ಧವಾಗಿ ಸರ್ಕಾರ ಆದೇಶ ಜಾರಿಗೆ ತಂದಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿರುವ ನ್ಯಾಯಾಲಯ, ಸರ್ಕಾರ ಸೂಚಿಸುವ ಸಮವಸ್ತ್ರವು ಸಮಂಜಸವಾದ ನಿರ್ಬಂಧವಾಗಿದೆ, ಸಾಂವಿಧಾನಿಕವಾಗಿ ಅನುಮತಿಸಲಾಗಿದೆ ಇದನ್ನು ವಿದ್ಯಾರ್ಥಿಗಳು ಆಕ್ಷೇಪಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಫೆಬ್ರವರಿ 5ರಂದು ಕರ್ನಾಟಕ ಸರ್ಕಾರ ಸಮವಸ್ತ್ರ ಕುರಿತು ಹೊರಡಿಸಿರುವ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಾಲಯ, ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್, ಜೆ ಎಂ ಖಾಜಿ ನೇತೃತ್ವದ ತ್ರಿಸದಸ್ಯ ಪೀಠ ಬಹುನಿರೀಕ್ಷಿತ ತೀರ್ಪನ್ನು ಇಂದು ಪ್ರಕಟಿಸಿದರು.

ಅರ್ಹತೆ ಇಲ್ಲದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ, ಸಮವಸ್ತ್ರವನ್ನು ಸೂಚಿಸುವ ಆದೇಶವನ್ನು ಹೊರಡಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ ಎಂದು ಹೇಳಿತು. ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡದ ಕಾಲೇಜಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿರ್ದೇಶನ ನೀಡಲು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಉಡುಪಿಯ ಸರ್ಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜು ಮತ್ತು ಹಲವರು ಸರ್ಕಾರ ಆದೇಶದ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಹಾಕಿದ್ದರು.

ಪರ್ದಾ ಅಥವಾ ಬುರ್ಖಾ ಕಡ್ಡಾಯವಲ್ಲ. ಆದರೆ ತಲೆ ಸ್ಕಾರ್ಫ್ ಅಥವಾ ಹಿಜಾಬ್ ಇಸ್ಲಾಮಿನಲ್ಲಿ ಅತ್ಯಗತ್ಯ ಭಾಗವಾಗಿದೆ ಮತ್ತು ಇಸ್ಲಾಮಿಕ್ ಶ್ಲೋಕಗಳು ಮತ್ತು ಧರ್ಮಗ್ರಂಥಗಳ ಮೂಲಕ ಕೇರಳ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ನ ಎರಡು ತೀರ್ಪುಗಳನ್ನು ಉಲ್ಲೇಖಿಸಿ ಅರ್ಜಿದಾರರ ವಕೀಲರು ವಾದ ಮಂಡಿಸಿದರು.

ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರಿ ಪರ, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಸಂವಿಧಾನದ 25 ನೇ ವಿಧಿಯಡಿಯಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬ ವಾದಗಳಿಗೆ ಬೆಂಬಲವಾಗಿ ಶಿರೂರು ಮಠದಿಂದ ಪ್ರಾರಂಭಿಸಿ ಶಬರಿಮಲೆ ಪ್ರಕರಣಗಳವರೆಗೆ ಹಲವಾರು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲೇಖಿಸಿ, ಅರ್ಜಿದಾರರು-ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ದೃಢೀಕರಿಸಲು ರಾಜ್ಯ ಸರ್ಕಾರ ವಾದಿಸಿತು.

ಕಳೆದ ಫೆಬ್ರವರಿ 10ರಂದು ಮಧ್ಯಂತರ ತೀರ್ಪು ನೀಡಿದ ಹೈಕೋರ್ಟ್ ಪೂರ್ಣ ಪ್ರಮಾಣ ಪೀಠ, ಎಲ್ಲಾ ವಿದ್ಯಾರ್ಥಿಗಳು ತಮ್ಮ ಧರ್ಮ, ಸಂಪ್ರದಾಯ ಬದಿಗಿಟ್ಟು ಧಾರ್ಮಿಕ ಸಂಕೇತ ಬಿಂಬಿಸುವ ಬಟ್ಟೆಗಳನ್ನು ಧರಿಸಿಕೊಂಡು ತರಗತಿಯೊಳಗೆ ಹೋಗಬಾರದು ಎಂದು ಆದೇಶ ಕೊಟ್ಟಿತ್ತು.

ಆದಾಗ್ಯೂ, ಈ ಮಧ್ಯಂತರ ಆದೇಶವು ಕಾಲೇಜು ಅಭಿವೃದ್ಧಿ ಸಮಿತಿಗಳು (ಸಿಡಿಸಿಗಳು) ವಿದ್ಯಾರ್ಥಿಗಳ ಡ್ರೆಸ್ ಕೋಡ್ / ಸಮವಸ್ತ್ರವನ್ನು ಸೂಚಿಸಿರುವ ಸಂಸ್ಥೆಗಳಿಗೆ ಸೀಮಿತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನಂತರ, ಮಧ್ಯಂತರ ಆದೇಶವು ಪದವಿ ಕಾಲೇಜುಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತವನ್ನು ವಿರೋಧಿಸಿ ಕರಾವಳಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ವಿವಾದ ಆರಂಭಿಸಿತ್ತು.

ಅದಕ್ಕೆ ನಾಲ್ಕು ದಿನ ಮೊದಲು ವಿದ್ಯಾರ್ಥಿನಿಯರು ಕಾಲೇಜು ಪ್ರಾಂಶುಪಾಲರಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಅಲ್ಲಿಯವರೆಗೆ ಕಾಲೇಜು ಕ್ಯಾಂಪಸ್ ವರೆಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದವರು ತರಗತಿಯೊಳಗೆ ಬಿಡಬೇಕೆಂದು ಕೇಳಿದರು ಎಂದು ಕಾಲೇಜು ಪ್ರಾಂಶುಪಾಲ ರುದ್ರೇ ಗೌಡ ತಿಳಿಸಿದ್ದಾರೆ.

ಕಳೆದ 35 ವರ್ಷಗಳಲ್ಲಿ ಕಾಲೇಜಿನೊಳಗೆ ತರಗತಿಯಲ್ಲಿರುವಾಗ ಹಿಜಾಬ್ ಧರಿಸುತ್ತಿರಲಿಲ್ಲ, ಅದು ವಿವಾದವೇ ಆಗಿರಲಿಲ್ಲ. ಈಗ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಕೇಳುತ್ತಿದ್ದವರಿಗೆ ಹಿಂದಿನಿಂದ ಯಾರೋ ಒತ್ತಡ ಹಾಕುತ್ತಿದ್ದಾರೆ ಎಂದು ರುದ್ರೇ ಗೌಡ ಆರೋಪಿಸಿದ್ದರು