- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಾವಗಡ ಖಾಸಗಿ ಬಸ್ಸ್ ದುರಂತದಲ್ಲಿ ಮೃತರ ಸಂಖ್ಯೆ ಏರಿಕೆ

Pavgad-Bus-Accident [1]ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದ ಬಳಿ  ಖಾಸಗಿ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ ಎಂಟು ಮೃತಪಟ್ಟು ಮೂವತ್ತೈದು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಬಸ್ಸಿನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರೆ 30ಕ್ಕೂ ಅಧಿಕ ಮಂದಿ ಬಸ್ಸಿನ ಮೇಲೆ ಕುಳಿತು ಸಾಗುತ್ತಿದ್ದರು. ಬೆಳಗ್ಗೆ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು, ಆಫೀಸಿಗೆ ಜನರು ಹೋಗುವ ಹೊತ್ತು. ಈ ದಾರಿಯಲ್ಲಿ ಸಂಚಾರಕ್ಕೆ ಬೇರೆ ಸಾರಿಗೆ ಸೌಕರ್ಯಗಳಿಲ್ಲದ ಕಾರಣ ಸಿಕ್ಕಿದ್ದ ಎಸ್ ವಿಟಿ ಬಸ್ಸಿನಲ್ಲಿ ಸಾಧ್ಯವಾದಷ್ಟು ಜನ ಹತ್ತಿದ್ದರು, ಬಸ್ಸು ವೈ ಎನ್ ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ಹೊರಟಿತ್ತು. ಬೆಳಗಿನ ಜಾವ 9 ಗಂಟೆ ಸುಮಾರಿಗೆ ವೀರಮ್ಮನಹಳ್ಳಿ ದಾಟಿದ ನಂತರ ಪಳವಳ್ಳಿ ಟ್ಯಾಂಕ್ ತಿರುವಿನಲ್ಲಿ ಬಸ್ಸು  ಚಾಲಕ ನಿಯಂತ್ರಣ ತಪ್ಪಿ ತೀವ್ರ ಅಪಘಾತಕ್ಕೀಡಾಗಿದೆ.

ಮೃತರನ್ನು ವೈ.ಎನ್.ಹೊಸಕೋಟೆಯ ಕಲ್ಯಾಣ್ (19), ಪೋತಗಾನಹಳ್ಳಿಯ ಅಮೂಲ್ಯ (16), ಬೆಸ್ತರಹಳ್ಳಿಯ ಶಹನಾಜ್ (20), ಶೂಲನಾಯಕನಹಳ್ಳಿ ಗ್ರಾಮದ ಅಜಿತ್ (27) ಎಂದು ಗುರುತಿಸಲಾಗಿದ್ದು, ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಬಸ್ಸು ತಲೆಕೆಳಗಾಗಿ ಬಿದ್ದ ತಕ್ಷಣ ಪ್ರಯಾಣಿಕರು ದಿಕ್ಕಾಪಾಲಗಿ ಬಿದ್ದಿದ್ದರು, ಬಸ್ಸಿನ ಎಡಭಾಗದಲ್ಲಿದ್ದವರು ಫುಟ್‌ಬೋರ್ಡ್‌ನಲ್ಲಿದ್ದವರು ಕೆಳಗೆ ಸಿಲುಕಿಕೊಂಡರು. ಒಂಬತ್ತು ಮಂದಿ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳನ್ನು ಪಾವಗಡ ಪಟ್ಟಣ, ತುಮಕೂರು ಮತ್ತು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಅಪಘಾತ ಸ್ಥಳದಿಂದ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಭೇಟಿ ನೀಡಿದ್ದಾರೆ.

ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಬಸ್‌ನಲ್ಲಿ ಕಿಕ್ಕಿರಿದು ಜನ ತುಂಬಿದ್ದು ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎಂದರು.

ಈ ಕುರಿತು ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಬಿ ಶ್ರೀರಾಮುಲು, ಘಟನೆಯ ಕುರಿತು ತನಿಖೆ ನಡೆಸಲಾಗುವುದು. ಮೃತರ ಸಂಬಂಧಿಕರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಪಾವಗಡ ತಾಲ್ಲೂಕು ಕಾಂಗ್ರೆಸ್ ಶಾಸಕ ಎಂ.ವೆಂಕಟರವಣಪ್ಪ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ದುರ್ಘಟನೆಯಲ್ಲಿ ಮೃತರಾದ ಮತ್ತು ಗಾಯಗೊಂಡವರ ಚಿಕಿತ್ಸೆಗೆ ಪರಿಹಾರ ನೀಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.